ಚಿತ್ರದುರ್ಗ: ಜನಾರೋಗ್ಯ ವಿಚಾರದಲ್ಲಿ ಹೆಚ್ಚು ನಿಗಾ ವಹಿಸಬೇಕು. ಅದಕ್ಕಾಗಿ ನಿರ್ವಹಣೆಯಲ್ಲಿ ಗ್ರಾಮ ಆರೋಗ್ಯ ನೈರ್ಮಲ್ಯ ಪೌಷ್ಠಿಕ ಸಮಿತಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕಾಸವರಹಟ್ಟಿ ಪಿಎಚ್‌ಸಿಯ ವೈದ್ಯಾಧಿಕಾರಿ ಡಾ.ಜೆ.ಕಾವ್ಯಾ ಸಲಹೆ ನೀಡಿದರು.
ತಾಲೂಕಿನ ಮದಕರಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಸವರಹಟ್ಟಿ ಪಿಎಚ್‌ಸಿಯಿಂದ ಸಮಿತಿ ಸದಸ್ಯರಿಗೆ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವಾಸ್ ಆಂದೋಲನ ತರಬೇತಿ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ವ್ಯಾಪ್ತಿಯಲ್ಲಿ 8 ಸಮಿತಿಗಳು ಕಾರ್ಯನಿರ್ವಹಿಸುತ್ತಿವೆ. ಸಮಿತಿ ಬಲವರ್ಧನೆ, ಸದಸ್ಯರು ಗ್ರಾಮಗಳಲ್ಲಿ ಕ್ರಿಯಾಶೀಲರಾಗಿ ಇರಲು ತರಬೇತಿ ಅತ್ಯವಶ್ಯಕವಾಗಿದ್ದು, ಸಾರ್ವಜನಿಕರ ಆರೋಗ್ಯ ಸಮಸ್ಯೆ ಸ್ಥಳೀಯವಾಗಿ ಚರ್ಚಿಸಿ, ಬಗೆಹರಿಸಲು ಪ್ರಯತ್ನಿಸಿ ಎಂದು ಸೂಚಿಸಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಬಾಲ್ಯವಿವಾಹ ತಡೆ, ತಾಯಿ-ಮಕ್ಕಳ ಮರಣ ನಿಯಂತ್ರಣ, ಶೌಚಾಲಯ ಬಳಕೆ, ಕೈ ತೊಳೆಯುವ ವಿಧಾನ, ಆರೋಗ್ಯಯುತ ಜೀವನ ಶೈಲಿ, ಘನ ತ್ಯಾಜ್ಯ ವಿಲೇವಾರಿ ಇನ್ನಿತರೆ ಕಾರ್ಯಕ್ರಮಗಳ ಕುರಿತು ಅರಿವು ಮೂಡಿಸಿ. ಆಂದೋಲನದ ಯಶಸ್ಸಿಗೆ ಸಹಕರಿಸಿ ಎಂದು ಮನವಿ ಮಾಡಿದರು.
ಜಿಲ್ಲಾ ಕಾರ್ಯಕ್ರಮ ಸಂಯೋಜಕ ಕರಕಪ್ಪ ಮೇಟಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ವಿಎಚ್‌ಎಸ್‌ಎನ್‌ಸಿ ಸದಸ್ಯರಾದ ಸಾವಿತ್ರಮ್ಮ, ಮಂಜುನಾಥ, ಯಶೋಧಮ್ಮ, ಲಕ್ಷ್ಮಿ, ಹಿರಿಯ ನಾಗರಿಕ ಮೂರ್ತಪ್ಪ ಇತರರಿದ್ದರು.