ಜಿಲ್ಲೆ

ಜನಾಭಿಪ್ರಾಯ ಕಡ್ಡಾಯ

ಶಿವಮೊಗ್ಗ: ಸ್ಮಾರ್ಟ್​ಸಿಟಿ ಯೋಜನೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಮುನ್ನ ಸ್ಥಳೀಯ ನಾಗರಿಕ ಸಮಿತಿಗಳು ಅಥವಾ ಜನಾಭಿಪ್ರಾಯ ಪಡೆದುಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ಭಾನುವಾರ ಸ್ಮಾರ್ಟ್​ಸಿಟಿ ಯೋಜನೆಯಡಿ ನೆಹರು ಕ್ರೀಡಾಂಗಣ, ಜಯನಗರ ಕನ್ಸರ್​ವೆನ್ಸಿ, ರಾಜೇಂದ್ರನಗರ ಚಾನಲ್, ಬಸವನಗುಡಿಯ ವಿನಾಯಕ ಪಾರ್ಕ್ ಮತ್ತು ನಗರ ಕೇಂದ್ರ ಗ್ರಂಥಾಲಯಕ್ಕೆ ಭೇಟಿ ನೀಡಿ ಡಿಜಿಟಲ್ ಲೈಬ್ರರಿ ಯೋಜನೆ ಅನುಷ್ಠಾನದ ಬಗ್ಗೆ ಪರಿಶೀಲಿಸಿದ ಅವರು, ಕಾಮಗಾರಿಗಳ ಅನುಷ್ಠಾನ ಪೂರ್ವ ಮತ್ತು ಅನುಷ್ಠಾನದ ವೇಳೆ ಸ್ಥಳೀಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರೊಂದಿಗೆ ರ್ಚಚಿಸಿ ಯೋಜನೆ ರೂಪಿಸಬೇಕು ಎಂದರು.

ಸ್ಥಳೀಯರ ಅಭಿಪ್ರಾಯ ಸ್ವೀಕರಿಸಿದ ಬಳಿಕ ಕಾಮಗಾರಿ ಆರಂಭಿಸಿದರೆ ಜನರಿಗೆ ಉಪಯೋಗಕರವಾದ ರೀತಿಯಲ್ಲಿ ಸೌಲಭ್ಯ ಕಲ್ಪಿಸಲು ಸಾಧ್ಯವಿದೆ. ಆರಂಭದಲ್ಲಿ ಕುಂಟುತ್ತ ಸಾಗುತ್ತಿದ್ದ ಸ್ಮಾರ್ಟ್​ಸಿಟಿ ಯೋಜನೆ ಕಾಮಗಾರಿಗಳು 6 ತಿಂಗಳಿನಿಂದ ಚುರುಕಿನಿಂದ ನಡೆಯುತ್ತಿದೆ ಎಂದು ಹೇಳಿದರು.

ಅವಧಿಗೆ ಪೂರ್ಣಗೊಳಿಸಲು ಸೂಚನೆ: ಎಲ್ಲ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಹಾಗೂ ಎಲ್ಲ ಟೆಂಡರ್ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಿ ಕಾರ್ಯಾದೇಶ ನೀಡಬೇಕು. ನಗರದ ಮಧ್ಯ ಭಾಗದಲ್ಲಿ ಹರಿದು ಹೋಗಿರುವ ಚಾನಲ್​ಗಳನ್ನು ಸ್ವಚ್ಛಗೊಳಿಸುವ ಕುರಿತು ಮೂರು ದಿನದೊಳಗೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಸಭೆ ಕರೆದು ಕ್ರಮ ಕೈಗೊಳ್ಳುವಂತೆ ಡಿಸಿ ಕೆ.ಬಿ.ಶಿವಕುಮಾರ್ ಅವರಿಗೆ ಸೂಚಿಸಲಾಗಿದೆ. ಚಾನಲ್​ನಲ್ಲಿ ತಿಳಿಯಾದ ನೀರು ಸದಾ ಕಾಲ ನಿಲ್ಲುವಂತೆ ಮಾಡಲು ಬ್ಯಾರೇಜ್ ನಿರ್ಮಾಣ ಸೇರಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸ್ಮಾರ್ಟ್​ಸಿಟಿ ಯೋಜನೆಯಡಿ ನಗರದಲ್ಲಿ 20 ಸಾವಿರ ಎಲ್​ಇಡಿ ದೀಪ ಅಳವಡಿಸಲಾಗುತ್ತಿದ್ದು ಟೆಂಡರ್ ಹಂತದಲ್ಲಿದೆ. ಇದರ ಸರಿಯಾದ ನಿರ್ವಹಣೆಗೂ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಉಪ ಮೇಯರ್ ಎಸ್.ಎನ್.ಚನ್ನಬಸಪ್ಪ ಹೇಳಿದರು. 

47 ಪ್ಯಾಕೇಜ್​ಗೆ 959 ಕೋಟಿ ರೂ.: ಸ್ಮಾರ್ಟ್​ಸಿಟಿ ಯೋಜನೆಯಡಿ ನಗರದಲ್ಲಿ 959 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು 47 ಪ್ಯಾಕೇಜ್ ಮಾಡಲಾಗಿದೆ ಎಂದು ಸ್ಮಾರ್ಟ್​ಟಿಸಿ ಎಂಡಿ ಚಿದಾನಂದ ವಟಾರೆ ತಿಳಿಸಿದರು. ಕಾಮಗಾರಿಗಳ ಪರಿಶೀಲನೆಗೂ ಮುನ್ನ ಸ್ಮಾರ್ಟ್​ಸಿಟಿ ಕಚೇರಿಯಲ್ಲಿ ಸಚಿವರಿಗೆ ಪ್ಯಾಕೇಜ್​ಗಳ ಕುರಿತು ಮಾಹಿತಿ ನೀಡಿದ ಅವರು, ಕನ್ಸರ್​ವೆನ್ಸಿಗಳನ್ನು ಅಭಿವೃದ್ಧಿಪಡಿಸಿ ಮಕ್ಕಳ ಆಟಿಕೆಗಳು, ರ್ಪಾಂಗ್, ಆಟೋ ರಿಕ್ಷಾ ನಿಲ್ದಾಣ ಮತ್ತು ವೆಂಡಿಂಗ್ಸ್​ಗೆ ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದರು. ಡಿಜಿಟಲ್ ಲೈಬ್ರರಿ, 13 ಪಾರ್ಕ್​ಗಳ ಅಭಿವೃದ್ಧಿ, ನೆಹರು ಮೈದಾನದಲ್ಲಿ 3 ಹಂತದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಕಸ ವಿಲೇವಾರಿ ಸೇರಿ ಇತ್ಯಾದಿ ಅಭಿವೃದ್ಧಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ನೆಹರು ಕ್ರೀಡಾಂಗಣಕ್ಕೆ ಸೌಕರ್ಯ ಕೊರತೆ: ನೆಹರು ಕ್ರೀಡಾಂಗಣಕ್ಕೆ ತೆರಳುತ್ತಿದ್ದಂತೆ ಸಚಿವ ಈಶ್ವರಪ್ಪ ಅವರಿಗೆ ಸಮಸ್ಯೆಗಳ ದೂರುಗಳೇ ಎದುರಾದವು. ನೆಹರು ಕ್ರೀಡಾಂಗಣದ ಸ್ನೇಹ ಸಂಘದ ಪದಾಧಿಕಾರಿಗಳು ವಾಸ್ತವವಾಗಿ ಎದುರಿಸುತ್ತಿರುವ ಸಮಸ್ಯೆ ಬಿಚ್ಚಿಟ್ಟರು. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. 20 ದಿನಗಳಿಂದ ವಿದ್ಯುತ್ ದೀಪಗಳಿಲ್ಲ. ಮಳೆ ಬಂದಾಗ ಸುತ್ತಮುತ್ತಲಿನ ಪ್ರದೇಶದ ನೀರು ಮೈದಾನಕ್ಕೆ ನುಗ್ಗುತ್ತಿದೆ. ಶೌಚಾಲಯ ಕ್ಲೀನ್ ಇಲ್ಲ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಶೌಚಾಲಯ ವ್ಯವಸ್ಥೆ ಸರಿಪಡಿಸಬೇಕು. ಬೆಳಕಿನ ವ್ಯವಸ್ಥೆ, ಅಗತ್ಯವಿರುವ ಎಲ್ಲ ಕಡೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಕ್ರೀಡಾಂಗಣವನ್ನು ಸುಸ್ಥಿತಿಯಲ್ಲಿರಿಸಲು ಕ್ರಮ, ರ್ಪಾಂಗ್ ಪ್ರತ್ಯೇಕ ವ್ಯವಸ್ಥೆ ಬಗ್ಗೆ ಕ್ರೀಡಾಪಟುಗಳೊಂದಿಗೆ ಸಮಾಲೋಚನೆ ನಡೆಸಿ ಕಾಮಗಾರಿ ಅನುಷ್ಠಾನಗೊಳಿಸುವಂತೆ ಸೂಚನೆ ನೀಡಿದರು. ನಗರ ಗ್ರಂಥಾಲಯಕ್ಕೆ ಭೇಟಿ ನೀಡಿದ ಸಚಿವರು, ಡಿಜಿಟಲ್ ಲೈಬ್ರರಿ ಉತ್ತಮ ಯೋಜನೆಯಾಗಿದ್ದು ಶಾಲಾ ಕಾಲೇಜು ಮಕ್ಕಳಿಗೆ ಅತ್ಯಂತ ಉಪಯುಕ್ತವಾಗಿದೆ. ಶಿಕ್ಷಣ ಸಚಿವರಿಂದ ಈ ಯೋಜನೆಯನ್ನು ಅಧಿಕೃತವಾಗಿ ಉದ್ಘಾಟಿಸಲು ಸಮಯ ನಿಗದಿಪಡಿಸುವಂತೆ ತಿಳಿಸಿದರು.

ಡಿಸಿ ಕೆ.ಬಿ.ಶಿವಕುಮಾರ್, ಯೋಜನಾ ನಿರ್ದೇಶಕ ಡಾ. ನಾಗೇಂದ್ರ ಹೊನ್ನಳ್ಳಿ, ಕಾರ್ಪೆರೇಟರ್ ಸುನೀತಾ ಅಣ್ಣಪ್ಪ ಸೇರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇದ್ದರು.