ಜಿಲ್ಲೆ

ಜನಾಕರ್ಷಿಸಿದ ‘ಎದೆಗೆ ಬಿದ್ದ ಅಕ್ಷರ’ ನಾಟಕ

ಮೈಸೂರು: ಸಾಹಿತಿ ದೇವನೂರು ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ಕೃತಿ ನಾಟಕ ರೂಪ ಪಡೆದಿದ್ದು, ಇದರ ಪ್ರಥಮ ಪ್ರದರ್ಶನ ಕಿರುರಂಗಮಂದಿರದಲ್ಲಿ ಭಾನುವಾರ ಸಂಜೆ ನಡೆಯಿತು. ರಂಗಾಸಕ್ತರಿಂದ ಉತ್ತಮ ಸ್ಪಂದನೆ ದೊರೆಯಿತು.

ರಂಗನಿರ್ದೇಶಕ ಸಿ.ಬಸವಲಿಂಗಯ್ಯ ನಿರ್ದೇಶನದಲ್ಲಿ ಎಸ್.ನಟರಾಜ್ ಬೂದಾಳ್ ಹಾಗೂ ಸಂತೋಷ್ ನಾಯಕ್ ಆರ್.ಕೃತಿಯನ್ನು ರಂಗರೂಪಕ್ಕೆ ತಂದಿದ್ದಾರೆ. ಪ್ರಶಾಂತ್ ಹೆಬ್ಬಸೂರು ರಂಗಸಜ್ಜಿಕೆ, ಸುಬ್ರಮಣ್ಯ ಧ್ವನಿ ವಿನ್ಯಾಸ, ಮಧು ಮಳವಳ್ಳಿ ಬೆಳಕು, ಕಾರ್ತಿಕ್ ಎಸ್.ರಂಗಶಿಬಿರ ಸಹಾಯಕರಾಗಿ ಕಾರ್ಯನಿರ್ವಹಿಸಿದರು.

ರಂಗಮಂದಿರ ಭರ್ತಿಯಾಗಿ ಈ ನಾಟಕದ ಮೊದಲ ಪ್ರಯೋಗಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮೇ 9, 18, 23, 24, 25ರಂದು ಮರು ಪ್ರದರ್ಶನ ಇರಲಿದೆ.

ಈ ನಾಟಕವು ಪ್ರೇಕ್ಷಕರೊಂದಿಗೆ ನೇರವಾಗಿ ಮುಖಾಮುಖಿಯಾಯಿತು. ಪಪೆಟ್‌ಗಳನ್ನು ರೂಪಕವಾಗಿ ಬಳಸಲಾಯಿತು. 14 ಕಲಾವಿದರು ಉತ್ತಮವಾಗಿ ಅಭಿನಯಿಸಿ ಸಭಿಕರ ಚಪ್ಪಾಳೆ ಗಿಟ್ಟಿಸಿದರು.

ದೇವನೂರು ಮಹದೇವ ಅವರು ನಾಟಕದಲ್ಲಿ ಇರುವುದಿಲ್ಲ. ಆದರೆ, ಅವರ ಆಶಯಗಳಿಗೆ ಒಂದೊಂದು ಪಾತ್ರಗಳು ಜೀವ ತುಂಬಿದವು. ಅನಂತಮೂರ್ತಿ ಅವರ ಪಾತ್ರವೂ ಗಮನ ಸೆಳೆಯಿತು.

ಇದು ಪ್ರೀತಿ, ಸಮತೆ, ಕಾರುಣ್ಯವೇ ಸಂದೇಶ ಕೊಟ್ಟಿತು. ಅದನ್ನೇ ಪಾತ್ರಗಳು ಪುನರುಚ್ಚರಿಸಿದವು. ಸಂವಿಧಾನದ ಪೀಠಿಕೆಯಲ್ಲಿರುವ ಸೌಹಾರ್ದತೆಯನ್ನೇ ಆಶಯ ರೂಪದಲ್ಲಿ ಮಂಡಿಸಲಾಯಿತು. ಧರ್ಮ ರಾಜಕಾರಣ ಜನರ ಮನಸ್ಸಿನಲ್ಲಿ ಯಾವ ರೀತಿ ಕ್ಷೋಭೆ ಉಂಟು ಮಾಡುತ್ತದೆ ಎಂಬ ಅಂಶವನ್ನು ಪಾತ್ರಗಳು ಸೂಕ್ಷ್ಮವಾಗಿ ಪ್ರಸ್ತುತ ಪಡಿಸಿದವು.