ಆನೇಕಲ್: ಸಿದ್ಧಾಂತ ಮತ್ತು ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಜನರು ಸ್ವಇಚ್ಛೆಯಿಂದ ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ಪಟ್ಟಣದಲ್ಲಿ ಆನೇಕಲ್ ಬಿಜೆಪಿ ಮಂಡಲದಿಂದ ಶನಿವಾರ ಆಯೋಜಿಸಿದ್ದ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಬಿಜೆಪಿಯ ಕಾರ್ಯಕರ್ತರು ಗ್ರಾಪಂ, ಪುರಸಭೆ, ನಗರಸಭೆಗಳ ವ್ಯಾಪ್ತಿಯಲ್ಲಿನ ವಾರ್ಡ್‌ಗಳಲ್ಲಿ ಮನೆ ಮನೆಗೆ ತೆರಳಿ ಸದಸ್ಯತ್ವ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಬೇಕು. ದೇಶದ ಹಿತ ಕಾಯುವ ಪಕ್ಷ ಬಿಜೆಪಿಯಾಗಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಜನಹಿತಕ್ಕಾಗಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಮುನಿರಾಜುಗೌಡ ಮಾತನಾಡಿ, ವಿಶ್ವದ ದೊಡ್ಡ ಪಕ್ಷವಾಗಿರುವ ಬಿಜೆಪಿಯು ದೇಶಾದ್ಯಂತ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದೆ. ದೇಶ ಮೊದಲು ಎಂಬ ರಾಷ್ಟ್ರೀಯವಾದಿ ಚಿಂತನೆಯುಳ್ಳ ಈ ಪಕ್ಷ ದೇಶದ ಅವಶ್ಯಕತೆಯಾಗಿದೆ. ಸರ್ವರಿಗೂ ಸಮಪಾಲು ಮತ್ತು ಸಮಬಾಳು ಸಿದ್ಧಾಂತವನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದೆ. ಜನ್‌ಧನ್ ಯೋಜನೆ, ಮೇಕ್‌ಇನ್ ಇಂಡಿಯಾ ಸೇರಿ ಹಲವಾರು ಯೋಜನೆಗಳನ್ನು ಕೇಂದ್ರ ಸರ್ಕಾರ ರೂಪಿಸಿದೆ ಎಂದರು. ಬಿಜೆಪಿ ಕಾರ್ಯಕರ್ತರು ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಮುಖಂಡರಾದ ಬಂಡಾಪುರ ರಾಮಚಂದ್ರ, ದಿನ್ನೂರು ರಾಜು, ನಾಗನಾಯಕನಹಳ್ಳಿ ರಾಧಾಕೃಷ್ಣ, ರಘು, ನರಸಿಂಹರೆಡ್ಡಿ, ಬಳ್ಳೂರು ವಸಂತ್‌ರೆಡ್ಡಿ, ಭರತ್, ಧನಂಜಯ್ ಇದ್ದರು.