ಜಿಲ್ಲೆ

ಜನಸ್ನೇಹಿ ವ್ಯವಸ್ಥೆಯಿಂದ ಸುರಕ್ಷೆ ಭಾವನೆ

ಭದ್ರಾವತಿ: ನಾಗರಿಕರು ಮತ್ತು ಪೊಲೀಸರ ನಡುವಿನ ಬಾಂಧವ್ಯ ಸ್ನೇಹಮಯಿಯಾಗಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ಮನೆಮನೆಗೆ ಪೊಲೀಸ್ ಕಾರ್ಯಕ್ರಮ ರೂಪಿಸಿದೆ ಎಂದು ಹೆಚ್ಚುವರಿ ಜಿಲ್ಲಾ ರಕ್ಷಣಾಕಾರಿ ಅನಿಲ್‌ಕುಮಾರ್ ಭೂಮರೆಡ್ಡಿ ತಿಳಿಸಿದರು. ನಗರದ ವೀರಶೈವ ಸಭಾಭವನದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಹಾಗೂ ಭದ್ರಾವತಿ ಉಪವಿಭಾಗದಿಂದ ಏರ್ಪಡಿಸಿದ್ದ ಮನೆಮನೆಗೆ ಪೊಲೀಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮೊದಲು ಬೀಟ್ ಮತ್ತು ಸಬ್ ಬೀಟ್ ವ್ಯವಸ್ಥೆ ಜಾರಿಯಲ್ಲಿತ್ತು. ಇದೀಗ ಮೈಕ್ರೋ ಲೆವೆಲ್ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಪೊಲೀಸ್ ಇಲಾಖೆಗೆ ಸಂಬಂಸಿದ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸುವುದರಿಂದ ಪೊಲೀಸರು ಮತ್ತು ಜನರಲ್ಲಿ ಅರಿವು ಮೂಡುತ್ತದೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆಯಿಂದ ಜನರಲ್ಲಿ ಸುರಕ್ಷೆ ಭಾವನೆ ಸೃಷ್ಟಿಯಾಗುತ್ತದೆ. ಪೊಲೀಸ್ ಸಿಬ್ಬಂದಿ ಭೇಟಿ ನೀಡಿದ ವೇಳೆ ಏನೇ ಸಮಸ್ಯೆ ಇದ್ದರೂ ಮುಕ್ತವಾಗಿ ತಿಳಿಸಬೇಕು. ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. ಡಿವೈಎಸ್ಪಿ ಕೆ.ಆರ್.ನಾಗರಾಜ್ ಮಾತನಾಡಿ, ಜನರ ಸಮಸ್ಯೆಗಳನ್ನು ಅರಿತು ಸ್ಪಂದಿಸಲು ಇಲಾಖೆ ಈ ಹಿಂದೆ ನಗರ ಪ್ರದೇಶದಲ್ಲಿ, ಮೊಹಲ್ಲಾ ಸಭೆ, ಗ್ರಾಮಗಳಲ್ಲಿ ಬೀಟ್ ವ್ಯವಸ್ಥೆ ರೂಪಿಸಿತ್ತು. ಇದೀಗ ಮನೆಮನೆಗೆ ಪೊಲೀಸ್ ವ್ಯವಸ್ಥೆಯಲ್ಲಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಲಾಗುವುದು ಎಂದರು. ನಗರ ಸಿಪಿಐ ಶ್ರೀಶೈಲಕುಮಾರ್, ಗ್ರಾಮಾಂತರ ಸಿಪಿಐ ಜಗದೀಶ್ ಹಂಚಿನಾಳ, ಹೊಳೆಹೊನ್ನೂರು ಸಿಪಿಐ ಶಿವಪ್ರಸಾದ್ ಇತರರಿದ್ದರು.

ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿ ಮತ್ತು ಆಡಳಿತ ಸ್ನೇಹಿಯಾಗಿಸಲು ಸರ್ಕಾರ ಮುಂದಾಗಿದೆ. ಪೊಲೀಸ್ ವ್ಯವಸ್ಥೆ ಬಗ್ಗೆ ಜನರಲ್ಲಿರುವ ಹೆದರಿಕೆ ತೊಲಗಬೇಕು. ಈ ಯೋಜನೆಯಡಿ ಸ್ಥಳೀಯ ಪೊಲೀಸ್ ಸಿಬ್ಬಂದಿ ಮನೆ ಮನೆಗೆ ಬಂದು ಜನರೊಂದಿಗೆ ಸಂವಾದ ನಡೆಸುವುದು ಸ್ವಾಗತಾರ್ಹ. ಮನೆಗಳಿಗೆ ಭೇಟಿ ನೀಡುವ ವೇಳೆ ಸಮವಸ್ತ್ರ ಧರಿಸದಿದ್ದರೆ ಉತ್ತಮ. ಇಂದಿರಾ ಮೈಲಾರ ಚೆಟ್ಟಿಯಾರ್,  4ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾದೀಶೆ