ಹಾಸನ : ಈ ಹಿಂದೆ ಬೆಂಗಳೂರಿನಲ್ಲಿ ಸಂಚಾರಿ ವಿಭಾಗ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಈಗ ಅಲ್ಲಿಂದ ವರ್ಗಾವಣೆಯಾಗಿ ಹಾಸನ ಜಿಲ್ಲೆಗೆ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಂದಿದ್ದೇನೆ. ಈ ಹಿಂದೆ ಇದ್ದ ಎಸ್ಪಿ ಹರಿರಾಂ ಶಂಕರ್ ಅವರು ಒಳ್ಳೆಯ ಕೆಲಸ ಮಾಡಿದ್ದು, ಆ ಕೆಲಸವನ್ನು ಮುಂದುವರೆಸುತ್ತೇನೆ ಎಂದು ಹಾಸನ ನೂತನ ಎಸ್‌ಪಿ ಮೊಹಮ್ಮದ್ ಸುಜಿತಾ ಹೇಳಿದರು.
ತಮ್ಮ ಕಚೇರಿಯಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಯನ್ನು ಜನಸ್ನೇಹಿ ಮಾಡುವುದು ನನ್ನ ಗುರಿ. ಸಮಸ್ಯೆ ಹೇಳಿಕೊಂಡು ಪೊಲೀಸ್ ಠಾಣೆಗೆ ಬರುವವರ ಸಮಸ್ಯೆ, ಕಷ್ಟ-ಸುಖವನ್ನು ಆಲಿಸಿ ವಿಚಾರಣೆ ಮಾಡಬೇಕು. ಕಾನೂನಾತ್ಮಕವಾಗಿ ಅವರಿಗೆ ಯಾವ ರೀತಿ ಸಹಾಯ ಮಾಡಬಹುದು ಎಂದು ಸಿಬ್ಬಂದಿ ತಿಳಿಸಿಕೊಡಬೇಕು. ಯಾರಿಗೆ ಸಮಸ್ಯೆಯಾಗಿದ್ದರೂ ಪೊಲೀಸ್ ಠಾಣೆ ಅಥವಾ ಎಸ್‌ಪಿ ಕಚೇರಿಗೆ ಬರಬಹುದು. ಪೊಲೀಸ್ ಠಾಣೆಯಲ್ಲಿ ಏನಾದರೂ ಲೋಪ ದೋಷ ಕಂಡು ಬಂದರೆ ನಮಗೆ ಮಾಹಿತಿ ಕೊಡಿ ಎಂದು ಹೇಳಿದರು.
ಈಗಾಗಲೇ ನಮ್ಮ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ಮಾಡಲಾಗಿದ್ದು, ಉತ್ತಮ ಕೆಲಸವನ್ನು ಮುಂದುವರೆಸಿಕೊಂಡು ಹೋಗುವ ಭರವಸೆ ನನಗಿದೆ. ಮುಖ್ಯವಾಗಿ ಮಹಿಳೆಯರು ಮತ್ತು ಮಕ್ಕಳ ರಕ್ಷಣೆ, ರೌಡಿಸಂ ನಿಯಂತ್ರಣದ ಸವಾಲು ನಮ್ಮ ಮುಂದೆ ಇದೆ. ಹಿಂದಿನ ಎಸ್ಪಿ ಈ ಬಗ್ಗೆ ಬಹಳಷ್ಟು ಕಾಳಜಿ ವಹಿಸಿ ಕೆಲಸ ಮಾಡಿದ್ದಾರೆ. ಅದನ್ನು ಮುಂದುವರೆಸಿಕೊಂಡು ಹೋಗಲಾಗುವುದು. ನಗರ ಹಾಗೂ ಜಿಲ್ಲೆಯಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆ ಮಾಡಬೇಕಿದೆ. ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಡುವುದಿಲ್ಲ ಎಂದರು.