ಜಿಲ್ಲೆ

ಜನಸೇವೆಗಾಗಿ ರಾಜಕೀಯಕ್ಕೆ ಬಂದಿರುವೆ: ಡಾ. ಮಂಥರ್ ಗೌಡ

ಮಡಿಕೇರಿ:

ನಾನು ರಾಜಕೀಯಕ್ಕೆ ದುಡ್ಡು ಮಾಡಲು ಬಂದಿಲ್ಲ, ಜನಸೇವೆಗೆ ಬಂದಿದ್ದೇನೆ ಎಂದು ಮಡಿಕೇರಿ ಕ್ಷೇತ್ರದ ನೂತನ ಶಾಸಕ ಡಾ. ಮಂಥರ್ ಗೌಡ ಹೇಳಿದರು. ಕಿರಿಯನಾದ ತನಗೆ ಅವಕಾಶ ಕೊಟ್ಟಿರುವ ಮತದಾರರಿಗೆ ದೊಡ್ಡ ಮಟ್ಟದಲ್ಲಿ ಬದಲಾವಣೆ ಅನುಭವ ಆಗುವಂತೆ ಮಾಡುತ್ತೇನೆ. ನಾನೊಬ್ಬ ವೈದ್ಯ ಆಗಿರುವುದರಿಂದ ಆರೋಗ್ಯ ಕ್ಷೇತ್ರ ಸುಧಾರಣೆಗೆ ಮೊದಲು ಆದ್ಯತೆ ಕೊಡಲಾಗುವುದು.

ಕಸ ನಿರ್ವಹಣೆ, ಕಂದಾಯ ಇಲಾಖೆಯಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರಕ್ಕೆ ಕಡಿವಾಣ, ಅಪೂರ್ಣ ಕಾಮಗಾರಿಗಳ ಪೂರ್ಣಗೊಳಿಸುವಿಕೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ, ಕ್ರೀಡೆಗೆ ಪ್ರೋತ್ಸಾಹ, ಕಾರ್ಮಿಕರಿಗೆ ಮನೆ ನಿರ್ಮಾಣಕ್ಕೆ ಹೆಚ್ಚಿನ ಪ್ರಯತ್ನ, ಪ್ರವಾಸೋದ್ಯಮ ಅಭಿವೃದ್ದಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕರಾಗಿ ಆಯ್ಕೆ ಆದ ನಂತರ ಭಾನುವಾರ ಇಲ್ಲಿ ಕರೆದಿದ್ದ ತಮ್ಮ ಮೊದಲ ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡರು.

ತಮ್ಮ ವಿರುದ್ಧ ಸಾಕಷ್ಟು ಟೀಕೆಗಳು ಬಂದವು. ಆದರೆ ನಾವು ಸಕರಾತ್ಮಕ ಮಾರ್ಗದಲ್ಲಿ ಪ್ರಚಾರ ಮಾಡಿ ಮತದಾರರ ಮನ ಗೆದ್ದಿದ್ದೇವೆ ಎಂದು ಹೇಳಿದರು.

ಹೈಕೋರ್ಟ್ ಹಿರಿಯ ವಕೀಲ ಚಂದ್ರಮೌಳಿ ಮಾತನಾಡಿ ಹೈಕಮಾಂಡ್ ಉತ್ತಮ ಸಮಯದಲ್ಲಿ ಉತ್ತಮ ವ್ಯಕ್ತಿಯನ್ನು ಕೊಡಗಿಗೆ ಕಳುಹಿಸಿಕೊಟ್ಟಿದೆ. ಕೊಡಗು ಬೇಲಿ ಇಲ್ಲದ ತೋಟದ ರೀತಿ ಆಗಿದೆ. ಇದಕ್ಕೆ ಬೇಲಿ ಹಾಕುವ ಕೆಲಸ ಮೊದಲು ಆಗಬೇಕು. ನಿನ್ನೆ ಏನಾಯಿತು ಎಂದು ನೋಡದೆ ನಾಳೆಯ ಚಿಂತೆ ಮಾಡಬೇಕು ಎಂದರು.

ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ ಇದೇ ಮೊದಲ ಬಾರಿಗೆ ಕೊಡಗು ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿನ ಹೊರಾಟ ನಡೆದಿದೆ. ಇದರ ಫಲವಾಗಿ ಎರಡೂ ಕ್ಷೇತ್ರಗಳಲ್ಲಿ ಪಕ್ಷ ಜಯಭೇರಿ ಭಾರಿಸಿದೆ ಎಂದರು.
ಪಕ್ಷದ ಮುಖಂಡರಾದ ಕೆ.ಪಿ. ಚಂದ್ರಕಲಾ, ಮುನೀರ್ ಅಹಮ್ಮದ್, ರಾಜೇಶ್ ಯಲ್ಲಪ್ಪ ಸುದ್ದಿಗೋಷ್ಠಿಯಲ್ಲಿ ಇದ್ದರು.