ಶೃಂಗೇರಿಯಲ್ಲಿ ಆಯೋಜಿಸಿದ್ದ ಜೆಸಿಐ ಸಪ್ತಾಹದ ಸಮಾರೋಪದಲ್ಲಿ ಶಾಸಕ ಟಿ.ಡಿ.ರಾಜೇಗೌಡ, ಸುಜನ್, ಶ್ರೀಕಾಂತ್, ರಾಘವೇಂದ್ರ, ಗಿರೀಶ್ ಉಳುವೆ, ರಮೇಶ್ ಶೂನ್ಯ, ಪೂರ್ಣಚಂದ್ರ ಇತರರಿದ್ದರು. 
ಜಿಲ್ಲೆ

ಜನಸೇವೆ ಮಾಡುತ್ತಿರುವ ಜೆಸಿಐ ಉತ್ತಮ ಸಂಸ್ಥೆ

ಶೃಂಗೇರಿ: ರಕ್ತದಾನ, ನೇತ್ರದಾನ, ತಂಬಾಕು ಉತ್ಪನ್ನಗಳ ಕುರಿತಿ ಜಾಗೃತಿ, ಬಡವರಿಗೆ ಪಡಿತರ ವಿತರಣೆ ಮುಂತಾದ ಕಾರ್ಯಕ್ರಮಗಳ ಮೂಲಕ ಜೆಸಿಐ ಅತ್ಯುತ್ತಮ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಡಾ. ವಿ.ಆರ್.ಗೌರೀಶಂಕರ್ ಸಭಾಂಗಣದಲ್ಲಿ ಶುಕ್ರವಾರ ಜೆಸಿಐ ಸಪ್ತಾಹದ ಸಮಾರೋಪದಲ್ಲಿ ಮಾತನಾಡಿ, ಸೇವಾಕಾರ್ಯದ ಜತೆಗೆ ವ್ಯಕ್ತಿತ್ವ ವಿಕಸನ ತರಬೇತಿಗೆ ಮಹತ್ವ ನೀಡುತ್ತ ಬಂದಿದೆ. ಸೃಜನಶೀಲತೆ, ಕ್ರಿಯಾಶೀಲತೆ ಜತೆಗೆ ಆತ್ಮವಿಶ್ವಾಸ ವೃದ್ಧಿಸುವ ಕಾರ್ಯಕ್ರಮ ರೂಪಿಸಿಕೊಂಡು ಬಂದಿದೆ. ಶಿಸ್ತು, ಪ್ರಾಮಾಣಿಕತೆ, ಮಾನವೀಯ ಮೌಲ್ಯಗಳನ್ನು ಸಾರುವ ಸಂಸ್ಥೆ ಪ್ರತಿ ವರ್ಷ ಸಪ್ತಾಹದ ಮೂಲಕ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿಕೊಂಡು ಬಂದಿದೆ. ಸಂಸ್ಥೆಯ ಕಾರ್ಯಕ್ರಮಕ್ಕೆ ಸಾರ್ವಜನಿಕರ ಸಹಕಾರ ಮುಖ್ಯ ಎಂದರು.
ವಲಯ-14ರ ಉಪಾಧ್ಯಕ್ಷ ಜೇಸಿ ಚರಣ್‌ರಾಜ್ ಮಾತನಾಡಿ, ಶೃಂಗೇರಿ ಜೆಸಿಐ ರೂಪಿಸುವ ಕಾರ್ಯಕ್ರಮ ಹಾಗೂ ಸೇವೆ ಪ್ರತಿಯೊಬ್ಬರಿಗೂ ಮಾದರಿ. ಸೇವೆ ಆತ್ಮತೃಪ್ತಿ ನೀಡಬೇಕು. ಜತೆಗೆ ಜನರನ್ನು ತಲುಪಬೇಕು. ಆಗ ಮಾತ್ರ ಸಂಸ್ಥೆ ಉದ್ದೇಶ ಈಡೇರುತ್ತದೆ ಎಂದರು.
ನಿರ್ದೇಶಕರಾದ ಕೆ.ಎನ್.ಪೂರ್ಣಚಂದ್ರ, ರಮೇಶ್ ಶೂನ್ಯ ಅವರನ್ನು ಗೌರವಿಸಲಾಯಿತು. ತಾಲೂಕಿನ 11 ಸರ್ಕಾರಿ ಶಾಲೆಗಳಿಗೆ ಜೆಸಿಐ ಹಾಗೂ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ನೀರು ಶುದ್ಧೀಕರಣ ಯಂತ್ರ ವಿತರಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗ್ರಾಯಕರಾದ ಪ್ರಗತಿ ಬಡಿಗೇರ, ಶೃಂಗೇರಿ ಆಶೀಶ್ ದೇವಾಡಿಗ ಮತ್ತು ಸಂಗಡಿಗರು ಗಾಯನ ನಡೆಸಿಕೊಟ್ಟರು.
ಅಧ್ಯಕ್ಷ ಕೆ.ಎ.ಸುಜನ್, ಕಾರ್ಯದರ್ಶಿ ಶ್ರೀಕಾಂತ್, ವಲಯ-14ರ ನಿರ್ದೇಶಕ ಪ್ರಸಾದ್ ಡಿ.ಆಚಾರ್ಯ, ಸಲಹೆಗಾರ ಶೇಖರ್ ಬೆಳ್ಳುಳ್ಳಿ, ಪೂರ್ವಾಧ್ಯಕ್ಷ ಗಿರೀಶ್ ಉಳುವೆ ಇದ್ದರು.