ಜಿಲ್ಲೆ

ಜನಸೇವಾ ಶಾಲೆಯಲ್ಲಿ ಗೋವಿಗೆ ರಾಖಿ

ಬೀದರ್: ನಗರದ ಪ್ರತಾಪನಗರದ ಜನಸೇವಾ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಗೋವಿಗೆ ರಾಖಿ ಕಟ್ಟಿ ರಕ್ಷಾ ಬಂಧನವನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಗೋವಿಗೆ ಪೂಜೆ ಮಾಡಿ, ರಾಖಿ ಕಟ್ಟಿದರು. ನಂತರ ವಿದ್ಯಾರ್ಥಿಗಳು ಪರಸ್ಪರ ರಾಖಿ ಕಟ್ಟಿ ಹಬ್ಬದ ಶುಭ ಕೋರಿದರು.
ಜನಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ರಕ್ಷಾ ಬಂಧನ ರಕ್ಷಣೆಯ ಸಂಕೇತವಾಗಿದೆ. ಪ್ರೀತಿ, ವಿಶ್ವಾಸ, ಭ್ರಾತೃತ್ವ ಬೆಳೆಸುವ, ಕಾಮ, ಕ್ರೋಧ ದೂರ ಮಾಡುವ ಹಬ್ಬವೂ ಹೌದು ಎಂದು ಅವರು ಹೇಳಿದರು.
ವಿದ್ಯಾರ್ಥಿಗಳಿಗೆ ರಕ್ಷಾ ಬಂಧನ ಮಹತ್ವ ಮನವರಿಕೆ ಮಾಡಲು ಶಾಲೆಯಿಂದ ಎರಡು ದಿನ ರಕ್ಷಾ ಬಂಧನ ಆಚರಿಸಲಾಗುತ್ತಿದೆ. ಅಲೆಮಾರಿಗಳ ಬಡಾವಣೆ ಸೇರಿ ವಿವಿಧ ಬಡಾವಣೆಗಳಿಗೆ ತೆರಳಿ ಜನರಿಗೆ ರಾಖಿ ಕಟ್ಟಲಾಗುತ್ತಿದೆ ಎಂದು ತಿಳಿಸಿದರು.
ಶಾಲೆಯ ಆಡಳಿತಾಧಿಕಾರಿ ಸೌಭಾಗ್ಯವತಿ ಮಾತನಾಡಿ, ರಕ್ಷಾ ಬಂಧನ ಸೋದರ ಬಾಂಧವ್ಯ ಬೆಸೆಯುವ ಹಬ್ಬವಾಗಿದೆ ಎಂದು ಹೇಳಿದರು.
ಮಹಾಭಾರತದಲ್ಲಿ ಕೃಷ್ಣನ ಬೆರಳಿಗೆ ಗಾಯವಾದಾಗ ದ್ರೌಪದಿ ಸೀರೆ ಹರಿದು ಪಟ್ಟಿ ಕಟ್ಟಿದ ಹಾಗೂ ಕೌರವರು ದ್ರೌಪದಿ ಸೀರೆ ಎಳೆದಾಗ ಕೃಷ್ಣ ರಕ್ಷಣೆ ಮಾಡಿದ ಪ್ರಸಂಗಗಳನ್ನು ಬಿಡಿಸಿಟ್ಟರು.
ಪ್ರೌಢಶಾಲೆ ಮುಖ್ಯಶಿಕ್ಷಕ ರಾಹುಲ್ ಸ್ವಾಗತಿಸಿದರು. ಶಿಕ್ಷಕಿ ನಿರ್ಮಲಾ ನಿರೂಪಿಸಿದರು. ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ನೀಲಮ್ಮ ಚಾಮರೆಡ್ಡಿ ವಂದಿಸಿದರು.