ಜಿಲ್ಲೆ

ಜನಸಾಮಾನ್ಯರಿಗೆ ಬಜೆಟ್ ಅರಿವು ಅಗತ್ಯ: ಹಣ ಹೂಡಿಕೆ ತಜ್ಞ ರಂಗಸ್ವಾಮಿ ಮೂಕನಹಳ್ಳಿ

ಮೈಸೂರು: ಸರ್ಕಾರಗಳು ಮಂಡಿಸುವ ಬಜೆಟ್‌ಗೂ ತಮಗೂ ಸಂಬಂಧ ಇಲ್ಲ ಎನ್ನುವ ಜನಸಾಮಾನ್ಯರ ಮನಸ್ಥಿತಿಯಿಂದ ಬಜೆಟ್ ಘೋಷಣೆಗಳು ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂದು ಹಣ ಹೂಡಿಕೆ ತಜ್ಞ ರಂಗಸ್ವಾಮಿ ಮೂಕನಹಳ್ಳಿ ಅಭಿಪ್ರಾಯಪಟ್ಟರು.
ಸ್ವದೇಶಿ ಜಾಗರಣ ಮಂಚ್, ಗೋಪಾಲಸ್ವಾಮಿ ಪದವಿ ಪೂರ್ವ ಕಾಲೇಜಿನಿಂದ ಸ್ವಾವಲಂಬಿ ಭಾರತ ಅಭಿಯಾನದ ಅಂಗವಾಗಿ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ತಿಂಗಳ ವಿಚಾರ ಸಂಕಿರಣದಲ್ಲಿ ಕರ್ನಾಟಕ ರಾಜ್ಯ ಬಜೆಟ್ ವಿಷಯವಾಗಿ ಅವರು ಮಾತನಾಡಿದರು.
ಯಾವುದೇ ಒಂದು ಬಜೆಟ್ ಮುಂದಿನ ಯೋಜನೆ, ಗುರಿಗೆ ಸಹಕಾರಿ ಆಗಿದೆ. ಆದರೆ ನಮ್ಮಲ್ಲಿ ಬಹಳಷ್ಟು ಜನರು ಬಜೆಟ್‌ಗೂ ತಮಗೂ ಸಂಬಂಧವೇ ಇಲ್ಲ ಎನ್ನುವ ಮನಸ್ಥಿತಿಯಲ್ಲಿದ್ದಾರೆ. ಹೀಗಾಗಿ ಬಜೆಟ್ ಘೋಷಣೆಯಾಗಿರುವ ಯೋಜನೆಗಳ ಬಗ್ಗೆ ಅರಿವು ಇರುವುದಿಲ್ಲ. ಯೋಜನೆಗಳು ಅನುಷ್ಠಾನಗೊಂಡವೋ ಅಥವಾ ಇಲ್ಲವೋ ಎನ್ನುವ ಮಾಹಿತಿಯೂ ಇರುವುದಿಲ್ಲ ಎಂದರು.
ಯೋಜನೆಗಳು ಅನುಷ್ಠಾನಗೊಳ್ಳುವಂತೆ ಸದಾ ಸರ್ಕಾರವನ್ನು ಎಚ್ಚರಿಸಬೇಕಾದ ಪ್ರತಿಪಕ್ಷಗಳು, ಇತ್ತೀಚಿನ ವರ್ಷಗಳಲ್ಲಿ ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಹೀಗಾಗಿ ಜನಸಾಮಾನ್ಯರಿಗೆ ಅನುಕೂಲವಾಗುವ ಯೋಜನೆಗಳು ಕೇವಲ ಘೋಷಣೆಗೆ ಮಾತ್ರ ಸೀಮಿತಗೊಳ್ಳುತ್ತಿವೆ ಎಂದು ಹೇಳಿದರು.
ಬಜೆಟ್ ಸಮಯದಲ್ಲಿ ಹಿಂದಿನ ಬಜೆಟ್ ಘೋಷಣೆಗಳು ಏನು? ಅವುಗಳಲ್ಲಿ ಎಷ್ಟು ಅನುಷ್ಠಾನಗೊಂಡಿವೆ?ಯಾವ ಯೋಜನೆ ಜಾರಿಯಾಗಿಲ್ಲ? ಎನ್ನುವ ಕುರಿತು ಅವಲೋಕನ ಮಾಡಿಕೊಳ್ಳುವುದು ಅಗತ್ಯವಿದೆ. ಆದರೆ ಇತ್ತ ಗಮನ ಇಲ್ಲದೆ ಇರುವುದರಿಂದ ಘೋಷಣೆಗಳು ತಮಗೆ ಇಷ್ಟಬಂದಂತೆ ಮಾಡಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ ಎಂದರು.
ಮಾನ್ಯತೆ ದೊರೆತಿರುವ ವಿಶ್ವದ 197 ದೇಶಗಳಲ್ಲಿ ಕೇವಲ 4ರಿಂದ 5 ದೇಶಗಳನ್ನು ಹೊರತುಪಡಿಸಿ ಉಳಿದ ಎಲ್ಲ ದೇಶಗಳು ಕೊರತೆ ಬಜೆಟ್ ಮಂಡಿಸಿಕೊಂಡು ಬರುತ್ತಿವೆ. ಇದರಿಂದ ಸಾಲದ ಹೊರೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಹೋಗುತ್ತಿದೆ. ಹೊರ ಜಗತ್ತಿಗೆ ಬಲಿಷ್ಠ ಎನ್ನುವಂತೆ ಬಿಂಬಿತವಾಗುತ್ತಿರುವ ಅಮೆರಿಕ ಕೂಡ ಆರ್ಥಿಕ ಹಿಂಜರಿತದಿಂದ ನಲುಗುತ್ತಿದೆ ಎಂದು ವಿವರಿಸಿದರು.
ಕರ್ನಾಟಕದಲ್ಲಿ ಈಗ ಹಲವು ಭಾಗ್ಯಗಳನ್ನು ಸರ್ಕಾರ ಘೋಷಿಸಿದ್ದು, ಅವುಗಳನ್ನು ಕಾರ್ಯರೂಪಕ್ಕೆ ತರಲು ರಾಜ್ಯದ ಒಟ್ಟು ಬಜೆಟ್‌ನಲ್ಲಿ ಶೇ.24.54ರಷ್ಟು ಹಣ ವಿನಿಯೋಗ ಮಾಡಬೇಕಿದೆ. ಈಗಾಗಲೇ 86 ಸಾವಿರ ಕೋಟಿ ರೂ.ನಷ್ಟು ಸಾಲದಲ್ಲಿ ಇರುವ ರಾಜ್ಯಕ್ಕೆ ಇನ್ನಷ್ಟು ಸಾಲದ ಹೊರೆಯಾಗುವ ಸಾಧ್ಯತೆ ಇದೆ. ಸಾಲ, ಅದಕ್ಕೆ ಬಡ್ಡಿ ಕಟ್ಟಲು ಇನ್ನಷ್ಟು ಆರ್ಥಿಕ ಹೊರೆ ಬೀಳಲಿದೆ ಎಂದು ಎಚ್ಚರಿಸಿದರು.
ಸ್ವದೇಶಿ ಜಾಗರಣ ಮಂಚ್‌ನ ದಕ್ಷಿಣ ಪ್ರಾಂತ್ಯ ಸಂಯೋಜಕ ಎನ್.ಆರ್.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವದೇಶಿ ಪರಿಕಲ್ಪನೆಯನ್ನು ಜನರಲ್ಲಿ ಜಾಗೃತಗೊಳಿಸಲು ಸ್ವದೇಶಿ ಜಾಗರಣ ಮಂಚ್ ಶ್ರಮಿಸುತ್ತಿದೆ. ಯಾವುದು ದೇಶಿ, ಯಾವುದು ವಿದೇಶಿ ವಸ್ತುಗಳು ಎನ್ನುವ ಪಟ್ಟಿ ಮಾಡಿ ಕರಪತ್ರ, ಪುಸ್ತಕದ ರೂಪದಲ್ಲಿ ಜನರಿಗೆ ತಲುಪಿಸಲಾಗುತ್ತಿದೆ ಎಂದರು.
ಸ್ವಾವಲಂಬಿ ಬದುಕು ಸಾಗಿಸುವ ಸಲುವಾಗಿ ಉದ್ಯೋಗಸ್ಥರಿಗೆ ಮಾರ್ಗದರ್ಶನ ನೀಡಲು ಪ್ರತಿ ಜಿಲ್ಲೆಯಲ್ಲೂ ಕೇಂದ್ರ ತೆರೆಯಲಾಗುವುದು. ವಿಷಯ ತಜ್ಞರು ಕೇಂದ್ರದಲ್ಲಿ ಆಸಕ್ತ ಉದ್ಯೋಗದಾತರಿಗೆ ಮಾರ್ಗದರ್ಶನ ನೀಡಲಾಗುವುದು. ಆಯಾ ಜಿಲ್ಲೆಗೆ ಸೂಕ್ತವಾದ ಉದ್ಯೋಗ ಆರಂಭಿಸಲು ಇದರಿಂದ ನೆರವಾಗುತ್ತದೆ ಎಂದು ತಿಳಿಸಿದರು.
ವೈದ್ಯ ಡಾ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಶಾರದಾ ವಿಲಾಸ ಕಾಲೇಜಿನ ಪ್ರಾಧ್ಯಾಪಕ ಸತ್ಯನಾರಾಯಣ ಇದ್ದರು.