ಅರಕಲಗೂಡು: ಜನಸಂಖ್ಯೆ ಹೆಚ್ಚಳಕ್ಕೆ ಆದಷ್ಟು ಕಡಿವಾಣ ಹಾಕಬೇಕಾಗಿದೆ ಎಂದು ಶಾಸಕ ಎ.ಮಂಜು ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬುಧವಾರ ಆಯೋಜಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಜನಸಂಖ್ಯೆ ಹೆಚ್ಚಳದಿಂದಾಗಿ ಪರಿಸರ ನಾಶ ಸೇರಿದಂತೆ ವಿವಿಧ ಸಮಸ್ಯೆಗಳು ಎದುರಾಗುತ್ತಿದೆ. ಜನಸಂಖ್ಯೆ ಹೆಚ್ಚಳಕ್ಕೆ ಕಡಿವಾಣ ಹಾಕದಿದ್ದರೆ ದೇಶದ ಅಭಿವೃದ್ಧಿಯ ಮೆಲೆ ತೀವ್ರ ಪರಿಣಾಮ ಬೀರಲಿದೆ. ಮುಖ್ಯವಾಗಿ ಬಡತನ, ನಿರುದ್ಯೋಗ, ಆಹಾರ, ವಸತಿ ಸೇರಿದಂತೆ ವಿವಿಧ ಸಮಸ್ಯೆಗಳು ಹೆಚ್ಚಳವಾಗುವ ಕಾರಣ ದೇಶದ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಕುಟುಂಬ ಯೋಜನೆಯನ್ನು ಪಾಲಿಸುವ ಮೂಲಕ ಜನಸಂಖ್ಯಾ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು.
ತಾಲೂಕು ಆರೋಗ್ಯಧಿಕಾರಿ ಡಾ.ಪುಷ್ಪಲತಾ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ನಾಗಪ್ಪ, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಅರುಂಧತಿ, ಎಸಿಡಿಪಿಒ ಸುಜಾತಾ, ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸ್ವಾಮಿಗೌಡ, ಉಪತಹಸೀಲ್ದಾರ್ ಸ್ವಾಮಿ, ಪಪಂ ಸದಸ್ಯ ನಿಖಿಲ್ ಕುಮಾರ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಎ.ಎಂ.ರಘು, ಶ್ರೀನಿವಾಸ ಮುರ್ತಿ, ತಾಲೂಕು ಅರೋಗ್ಯ ಶಿಕ್ಷಣಾಧಿಕಾರಿ ಕೆ.ಟಿ.ಪರಮೇಶ್, ತಾಲೂಕು ಆರೋಗ್ಯ ನಿರೀಕ್ಷಕ ಕೆ.ಎನ್.ಚಂದ್ರೇಗೌಡ, ಆಶಾ, ಎಸ್.ಜಿ ಕವಿತಾ ಇದ್ದರು.
ಕಾರ್ಯಕ್ರಮಕ್ಕೂ ಮುನ್ನ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಟಿಎಚ್‌ಒ ಪುಷ್ಪಲತಾ ಚಾಲನೆ ನೀಡಿದರು. ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಿ ಜನಸಂಖ್ಯಾ ಸ್ಫೋಟದ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿದರು.