ಸುರಪುರ : ಜನಸಂಖ್ಯೆ ನಿಯಂತ್ರಣ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಬಹಳ ಅಗತ್ಯವಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಆರ್.ವಿ.ನಾಯಕ ಹೇಳಿದರು.
ಆರೋಗ್ಯ ಇಲಾಖೆಯು ಪ್ರಭು ಮಹಾವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಜನಸಂಖ್ಯಾ ದಿನ ಕಾರ್ಯಕ್ರಮ ಉದ್ಘಾಟಿಸಿದ ಅವರು, ದೇಶದಲ್ಲಿ ಏರುತ್ತಿರುವ ಜನಸಂಖ್ಯೆ ನಿಯಂತ್ರಿಸದಿದ್ದರೆ ಮುಂದೆ ದೊಡ್ಡ ಅಪಾಯ ಎದುರಿಸಬೇಕಾಗುತ್ತದೆ. ಹೀಗಾಗಿ ಜನಸಂಖ್ಯೆ ನಿಯಂತ್ರಣ ಕುರಿತು ಜನಜಾಗೃತಿ ಮೂಡಿಸಬೇಕಿದೆ ಎಂದರು.
ಪ್ರಾಚಾರ್ಯ ಮಹ್ಮದ್ ವಾರೀಸ್ ಮಾತನಾಡಿದರು. ಕ್ಯಾಂಪಸ್ ಅಧಿಕಾರಿ ವೇಣುಗೋಪಾಲ ನಾಯಕ ಜೇವರ್ಗಿ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಇಲಾಖೆಯ ತುಳಸಿರಾಮ, ಎಚ್‌ಇಒ ನಿಂಗಮ್ಮ ನಾಯ್ಕೋಡಿ, ಉಪನ್ಯಾಸಕರಾದ ರಂಜಿತಾ, ಸುನೀತಾ, ನಮ್ರತಾ, ಸನಾ ಮುರಾಡ್, ಮದಿಯಾ ಇದ್ದರು. ಡಾ.ಉಪೇಂದ್ರನಾಯಕ ಸುಬೇದಾರ ನಿರೂಪಣೆ ಮಾಡಿದರು. ವಿದ್ಯಾರ್ಥಿ ದಿಲೀಪಸಿಂಗ್ ವಂದಿಸಿದರು.