ಬೆಳಗಾವಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 150 ಸ್ಥಾನ ಗಳಿಸುತ್ತದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಮನ ಭೇದವಿಲ್ಲ. ಬಿಜೆಪಿಯ ಜನಸಂಕಲ್ಪಯಾತ್ರೆಗೆ ವ್ಯಾಪಕ ಸ್ಪಂದನೆ ಸಿಗುತ್ತಿದೆ. ಬಿ.ಎಸ್.ಯಡಿಯೂರಪ್ಪ ಅವರು ನಮ್ಮ ಪಕ್ಷದ ದೊಡ್ಡ ಶಕ್ತಿ. ಅವರು ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನಪರ ಯೋಜನೆಗಳು ಜನಮೆಚ್ಚುಗೆಗೆ ಪಾತ್ರವಾಗಿದೆ. ಈ ಯೋಜನೆಗಳಿಂದಾಗಿಯೇ ಪಕ್ಷ ಸಂಘಟನೆಯಾಗುತ್ತಿದೆ ಎಂದರು. ಬೆಳಗಾವಿಯಲ್ಲಿ ಜಿಲ್ಲೆಯಲ್ಲಿ ಪಕ್ಷ ಬಲಿಷ್ಠವಾಗಿದೆ. ಇಲ್ಲಿಯ ಮುಖಂಡರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಾಗಲಿ, ಬಣಗಳಾಗಲಿ ಇಲ್ಲ. ಬಿ.ಎಸ್. ಯಡಿಯೂರಪ್ಪ ಕುರಿತು ಬಸನಗೌಡ ಪಾಟೀಲ ಯತ್ನಾಳ ಆ ರೀತಿ ಮಾತನಾಡಬಾರದಿತ್ತು. ಅವರ ಹೇಳಿಕೆಗಳನ್ನು ಗಮನಿಸಿದ್ದೇವೆ. ಪಕ್ಷದ ಮಟ್ಟದಲ್ಲಿ ಏನೇನು ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡುತ್ತೇವೆ ಎಂದರು.
ಶಾಸಕ ರಮೇಶ ಜಾರಕಿಹೊಳಿ ಅವರು ಪ್ರಭಾವಶಾಲಿ ವ್ಯಕ್ತಿ. ಹೀಗಾಗಿ ಪಕ್ಷ ಸಂಘಟನೆ ದೃಷ್ಟಿಯಿಂದ ಅವರೊಂದಿಗೆ ಸಮಾಲೋಚನೆ ಮಾಡುತ್ತಿರುತ್ತೇವೆ. ಪರಸ್ಪರ ಭೇಟಿಯಾದಾಗ ಚರ್ಚಿಸುವುದು ಸಾಮಾನ್ಯ. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಂಸದೆ ಮಂಗಲ ಅಂಗಡಿ,ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಶಾಸಕರಾದ ಅನಿಲ ಬೆನಕೆ, ಮಹೇಶ ಕುಮಠಳ್ಳಿ, ಮಾಜಿ ಶಾಸಕ ಸಂಜಯ ಪಾಟೀಲ, ಕಿರಣ ಜಾಧವ, ಉಜ್ವಲಾ ಬಡವನಾಚೆ, ಎಂ.ಬಿ. ಝಿರಲಿ ಇದ್ದರು.
ಜಾರಕಿಹೊಳಿಯೊಂದಿಗೆ ಪ್ರತ್ಯೇಕ ಚರ್ಚೆ: ಅರುಣ ಸಿಂಗ್ ಅವರು ಭಾನುವಾರ ಸುದ್ದಿಗೋಷ್ಠಿಗೂ ಮುನ್ನ ಶಾಸಕ ರಮೇಶ ಜಾರಕಿಹೊಳಿ ಅವರೊಂದಿಗೆ ಸುಮಾರು 1 ಗಂಟೆ ಕಾಲ ಪ್ರತ್ಯೇಕವಾಗಿ ಮಾತನಾಡಿದ್ದು ಚರ್ಚೆಗೆ ಗ್ರಾಸವಾಯಿತು. ಸಂಜೆ 6 ಗಂಟೆಗೆ ಪ್ರವಾಸಿ ಮಂದಿರಕ್ಕೆ ಆಗಮಿಸಿದ ರಮೇಶ ಜಾರಕಿಹೊಳಿ ಅವರು ಗಂಟೆ ಕಾಲ ಅರುಣಸಿಂಗ್ ಜತೆ ಚರ್ಚೆ ನಡೆಸಿದರು. ಇದಾದ ಬಳಿಕ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಆಗಮಿಸಿದ ಬಳಿಕ ಅವರೊಂದಿಗೂ ಅರುಣಸಿಂಗ್ ಪ್ರತ್ಯೇಕವಾಗಿ ಮಾತನಾಡಿದರು.