ಹುಬ್ಬಳ್ಳಿ: ಲಾಕ್ಡೌನ್ ಸಡಿಲಿಕೆ ನಂತರ ಹುಬ್ಬಳ್ಳಿ-ಬೆಂಗಳೂರು-ಹುಬ್ಬಳ್ಳಿ ಮಧ್ಯೆ ಸಂಚಾರ ಪ್ರಾರಂಭಿಸಿರುವ ಜನಶತಾಬ್ದಿ ರೈಲಿಗೆ ಪ್ರಯಾಣಿಕರಿಂದ ಸಾಮಾನ್ಯ ಸ್ಪಂದನೆ ವ್ಯಕ್ತವಾಗಿದೆ.
ಲಾಕ್ಡೌನ್ ಮುಂಚೆ ಈ ರೈಲಿನಲ್ಲಿ ಸಾವಿರಾರು ಜನ ಪ್ರಯಾಣಿಸುತ್ತಿದ್ದರು. ಆದರೆ, ಕರೊನಾ ಆತಂಕ ರೈಲ್ವೆ ಪ್ರಯಾಣಿಕರನ್ನೂ ಬಿಟ್ಟಿಲ್ಲ. ಜನಶತಾಬ್ದಿ ರೈಲು ಸಂಚಾರದ ಎರಡನೇ ದಿನವೂ ಈ ರೈಲಿನಲ್ಲಿ ಪ್ರಯಾಣಿಸಿದ ಜನರ ಸಂಖ್ಯೆ ಅತಿ ವಿರಳವಾಗಿತ್ತು. ಮಂಗಳವಾರ ಜನಶತಾಬ್ದಿ ರೈಲಿನ ಮೂಲಕ 90 ಪ್ರಯಾಣಿಕರು ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದಿಳಿದರೆ, 170 ಜನ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣಿಸಿದರು.
ಮಧ್ಯಾಹ್ನ 1.50ಕ್ಕೆ ಬೆಂಗಳೂರಿನಿಂದ ಬರಬೇಕಿದ್ದ ಜನಶತಾಬ್ದಿ ರೈಲು, ನಿಗದಿತ ಅವಧಿಗೆ ಮುಂಚೆಯೇ ಸುಮಾರು 12.50ಕ್ಕೆ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಿತು. ಮಾರ್ಗ ಮಧ್ಯದ ಹಾವೇರಿ, ದಾವಣಗೆರೆ, ತುಮಕೂರು ಸೇರಿ ಇತರ ನಿಲ್ದಾಣಗಳಲ್ಲಿಯೂ ಹಲವು ಪ್ರಯಾಣಿಕರು ರೈಲು ಹತ್ತಿಳಿದರು.
ಹುಬ್ಬಳ್ಳಿ ನಿಲ್ದಾಣಕ್ಕೆ ಬಂದಿಳಿದ ಹಾಗೂ ಇಲ್ಲಿಂದ ಬೆಂಗಳೂರಿಗೆ ಹೊರಟ ಎಲ್ಲ ಪ್ರಯಾಣಿಕರ ಥರ್ಮಲ್ ಸ್ಕ್ರೀನಿಂಗ್ ಟೆಸ್ಟ್ ನಡೆಸಲಾಯಿತು. ಪ್ರಯಾಣಿಕರು ರೈಲಿನಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಪೊಲೀಸರು ಸೂಚಿಸಿದರು. ಮಧ್ಯಾಹ್ನ ಸುಮಾರು 4 ಗಂಟೆಗೆ ನಗರದಿಂದ ಹೊರಟ ಹುಬ್ಬಳ್ಳಿ/ವಾಸ್ಕೊ ಡ ಗಾಮ - ನಿಜಾಮುದ್ದೀನ್ ಲಿಂಕ್ ಎಕ್ಸ್ಪ್ರೆಸ್ ರೈಲಿನಲ್ಲಿ ಹುಬ್ಬಳ್ಳಿಯಿಂದ 207 ಜನರು ಪ್ರಯಾಣಿಸಿದರು. ಒಟ್ಟು 366 ಪ್ರಯಾಣಿಕರು ಈ ರೈಲಿನಲ್ಲಿ ಪ್ರಯಾಣಿಸಲಿದ್ದು, ಇನ್ನುಳಿದವರು ಮಾರ್ಗ ಮಧ್ಯೆ ರೈಲು ಏರಲಿದ್ದಾರೆ.
ತವರಿಗೆ ಮರಳಿದ ಕಾರ್ವಿುಕರು: ಚಿಕ್ಕೋಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಉತ್ತರ ಪ್ರದೇಶದ ಜಾನ್ಸಿ ಮೂಲದ 21 ವಲಸೆ ಕಾರ್ವಿುಕರು ಹುಬ್ಬಳ್ಳಿ-ನಿಜಾಮುದ್ದೀನ್ ಎಕ್ಸ್ಪ್ರೆಸ್ ರೈಲಿನ ಮೂಲಕ ಮಂಗಳವಾರ ತವರು ಜಿಲ್ಲೆಗೆ ಪ್ರಯಾಣಿಸಿದರು. ನವಲಗುಂದದಲ್ಲಿ ಕೃಷಿ ಹೊಂಡ ತೋಡುವ ಕೆಲಸ ಮಾಡುತ್ತಿದ್ದ ಕೋಲ್ಕತದ ವಲಸೆ ಕಾರ್ವಿುಕರ ಕುಟುಂಬ ಜನಶತಾಬ್ದಿ ಎಕ್ಸ್ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ತೆರಳಿತು.