ಮೈಸೂರು: ಉಪಚುನಾವಣೆಯಲ್ಲಿ ನಾವು ಎಲ್ಲಿಯೂ ಎಡವಿಲ್ಲ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಸ್ವಂತ ಬಲದಿಂದ ಗೆದ್ದಿಲ್ಲ. ಸಿ.ಪಿ.ಯೋಗೇಶ್ವರ್ ಅವರಿಂದ ಗೆದ್ದಿರೋದು ಎಂದು ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು 15 ಸಾವಿರ ಮತಗಳಿದ್ದವು ಎಂದು ಡಿ.ಕೆ. ಶಿವಕುಮಾರ್ ಅವರೇ ಹೇಳಿದ್ದರು. ನಾವು ಕಾಂಗ್ರೆಸ್‌ನಿಂದ ಗೆದ್ದಿಲ್ಲ ಎಂದು ಅವರೇ ಹೇಳಿಕೊಂಡಿದ್ದಾರೆ. ಹೀಗಾಗಿ, ಈ ಗೆಲುವಿನ ಕ್ರೆಡಿಟ್ ಸರ್ಕಾರಕ್ಕೆ ಕೊಡಲು ಆಗುತ್ತದೆಯೇ? ಎಂದು ಪ್ರಶ್ನಿಸಿದರು.
ಉಪಚುನಾವಣೆಗಳಲ್ಲಿ ಆಡಳಿತ ಸರ್ಕಾರಕ್ಕೆ ಅನುಕೂಲ ಇರುತ್ತದೆ. ಹೀಗಾಗಿ, ಆಡಳಿತ ಪಕ್ಷ ಗೆದ್ದಿರುವಾಗ ಮಹತ್ವ ಇರೋಲ್ಲ. ಸೋತಾಗ ಮಹತ್ವ ಇರುತ್ತದೆ. ಆಡಳಿತ ಪಕ್ಷ ಜನವಿರೋಧಿಯಾಗಿರುವುದು, ಜನರ ವಿಶ್ವಾಸ ಕಳೆದುಕೊಂಡಿರೋದು ಇಡೀ ದೇಶಕ್ಕೆ ಗೊತ್ತಾಗಿದೆ. ಇದು ಎಟಿಎಂ ಸರ್ಕಾರ, ಭ್ರಷ್ಟ ಸರ್ಕಾರ, ಜನವಿರೋಧಿ ಸರ್ಕಾರ ಎಂಬುದು ತಿಳಿಸಿದೆ ಎಂದು ಹರಿಹಾಯ್ದರು.
‘ಬಿಜೆಪಿ ನಾಯಕರ ಸಹಕಾರ ಪಡೆದು ಗೆದ್ದಿದ್ದೇವೆ’ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಕಾರಣಕ್ಕೂ ಆ ರೀತಿ ಆಗಿಲ್ಲ. ಕಾಂಗ್ರೆಸ್‌ನಲ್ಲಿ ಪಕ್ಷ ನಿಷ್ಠೆ ಇದೆಯೋ ಇಲ್ವೋ ಗೊತ್ತಿಲ್ಲ. ನಮ್ಮಲ್ಲಿ ಪಕ್ಷ ನಿಷ್ಠೆ ಇದೆ. ನಮ್ಮ ಮನೆ ಬಾಗಿಲು ದಾಟಿ ಒಮ್ಮೆ ಹೋದ ಮೇಲೆ ಅಲ್ಲಿಗೆ ಮುಗಿತು. ಸಿ.ಪಿ.ಯೋಗೇಶ್ವರ್ ಅವರನ್ನು ನಾವು ಎದುರಾಳಿಯಾಗಿ ನೋಡಿದ್ದೇವೆ ಎಂದರು.
ನಿಖಿಲ್ ಕುಮಾರಸ್ವಾಮಿ ಪ್ರಭಾವಿಯಾಗಿ ಈ ಚುನಾವಣೆ ಎದುರಿಸಿದ್ದಾರೆ. ನಿಖಿಲ್ ಆಗಿರುವುದಕ್ಕೆ ಈ ಮಟ್ಟಕ್ಕೆ ಚುನಾವಣೆ ಎದುರಿಸಿದ್ದು, ಮೂರು ದಶಕಗಳಿಂದ ನಿರಂತರವಾಗಿ ಜನರ ಸಂಪರ್ಕ ಇರುವುದರಿಂದ ಯೋಗೇಶ್ವರ್ ಗೆದ್ದಿದ್ದಾರೆ. ಈ ಗೆಲುವು ಕೂಡ ತಾತ್ಕಾಲಿಕ. 2028ರ ವಿಧಾನಸಭೆ ಚುನಾವಣೆಗೆ ನೋಡೋಣ ಎಂದರು.
ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಬಿಜೆಪಿ ಬಂಡಾಯ ನಾಯಕರ ಜಾಗೃತಿ ಅಭಿಯಾನದಿಂದ ನಮಗೇನು ಮುಜುಗರ ಇಲ್ಲ. ಕಾಂಗ್ರೆಸ್‌ಗೆ ಮುಜುಗರ. ವಕ್ಫ್ ಮಂಡಳಿ ವಿಚಾರದಲ್ಲಿ ಅಲ್ಪಸಂಖ್ಯಾತರ ತುಷ್ಟ್ರೀಕರಣ ಮಾಡ್ತಿರೋದು ಸ್ಪಷ್ಟವಾಗಿ ಗೊತ್ತಿದೆ. ವಕ್ಫ್ ಮಂಡಳಿ ಮೂಲಕ ರೈತರ ಜಮೀನು ಹೇಗೆ ಕಬಳಿಸಿದ್ದಾರೆ ಎಂಬುದು ತಿಳಿದಿದೆ ಎಂದು ಹರಿಹಾಯ್ದರು.
ಕಾಂಗ್ರೆಸ್‌ನ ವೈಫಲ್ಯವನ್ನು ಬಯಲಿಗೆಳೆಯಲು ನಮ್ಮ ಪಕ್ಷದವರು ಹೋರಾಟ ಮಾಡುತ್ತಿದ್ದಾರೆ. ಅಧಿಕೃತವಾಗಿ ಪಕ್ಷದ ವತಿಯಿಂದಲೂ ನಡೆದಿದೆ. ಈಗ ಇವರು ಕೂಡ ಮಾಡುತ್ತಿದ್ದಾರೆ. ಅದರ ಪಾಡಿಗೆ ಅದು ನಡೆಯುತ್ತದೆ. ಚುನಾಯಿತ ಜನಪ್ರತಿನಿಧಿಗಳಾಗಿ ಇವರು ಮಾಡುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.
ಬಿಜೆಪಿ ನಾಯಕರ ಭಿನ್ನಾಭಿಪ್ರಾಯವನ್ನೆಲ್ಲ ಅರಗಿಸಿಕೊಳ್ಳುವ ಶಕ್ತಿ ನಮಗಿದೆ. ನಮ್ಮದು ರಾಷ್ಟ್ರೀಯ ಪಕ್ಷ. ಕಾಂಗ್ರೆಸ್ ಕುಟುಂಬ ಪಕ್ಷವಾಗಿದೆ. ಜನರ ವಿಶ್ವಾಸ, ಆಶೀರ್ವಾದ ನಮಗಿರುವವರೆಗೆ ಯಾವುದೇ ಅಡೆತಡೆ ಇಲ್ಲ ಎಂದರು.
ಸಚಿವ ಜಮೀರ್ ಅಹಮ್ಮದ್ ಅವರು ಸಿದ್ದರಾಮಯ್ಯ ಅವರ ಅನುಮತಿ ಪಡೆದು ವಕ್ಫ್ ಪ್ರಕ್ರಿಯೆ ಶುರು ಮಾಡಿದ್ದರು. ಆಸ್ತಿಗಳಿಗೆ ಬೇಲಿ ಹಾಕಿಕೊಳ್ಳಲು ಮುಂದಾಗಿದ್ದರು. ಈಗ ಬೇಲಿ ಬಿಟ್ಟು ಓಡಿಹೋಗಿದ್ದಾರೆ ಎಂದು ಟೀಕಿಸಿದರು.