ಚನ್ನಮ್ಮ ಕಿತ್ತೂರಿನಲ್ಲಿ ತಾಪಂ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿದರು. ತಾಪಂ ಇಒ ಸುಭಾಷ ಸಂಪಗಾವಿ, ತಹಸೀಲ್ದಾರ್ ರವಿ ಹಾದಿಮನಿ ಇತರರಿದ್ದರು. 
ಜಿಲ್ಲೆ

ಜನವಿರೋಧಿ ಅಧಿಕಾರಿಗಳಿಗೆ ಜಾಗವಿಲ್ಲ

ಚನ್ನಮ್ಮ ಕಿತ್ತೂರು: ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಪ್ರತಿಭೆಗಳಿದ್ದು ಅವಕಾಶಗಳ ಕೊರತೆಯಿಂದ ಹಿಂದುಳಿದಿದ್ದಾರೆ. ಹಾಗಾಗಿ, ಸಾರಿಗೆ ಅಧಿಕಾರಿಗಳು ಗ್ರಾಮೀಣ ಭಾಗಕ್ಕೆ ಹೆಚ್ಚು ಬಸ್ ಸೌಕರ್ಯ ಒದಗಿಸುವ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಹಿತ ಕಾಯಬೇಕು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಸೂಚನೆ ನೀಡಿದರು.

ಸ್ಥಳೀಯ ತಾಪಂ ಸಭಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹರಿಸುವ ಕಾರ್ಯ ಮಾಡಬೇಕು. ಜನವಿರೋಧಿ ಧೋರಣೆ ತೋರುವ ಅಧಿಕಾರಿಗಳಿಗೆ ನನ್ನ ಕ್ಷೇತ್ರದಲ್ಲಿ ಸ್ಥಳವಿಲ್ಲ ಖಡಕ್ ಎಚ್ಚರಿಕೆ ನೀಡಿದರು.

ಗುತ್ತಿಗೆದಾರರ ಕಾಮಗಾರಿ ಟೈಮ್ ಬಾಂಡ್ ಮುಗಿದಿದ್ದು, ಇನ್ನೂ ಅನೇಕ ಕಡೆ ಕಾಮಗಾರಿಗಳು ಅಪೂರ್ಣಗೊಂಡಿವೆ. ಅದರಲ್ಲೂ ಜಲಜೀವನ್ ಮಿಷನ್ ಯೋಜನೆಯಂತೂ ಕ್ಷೇತ್ರದಲ್ಲಿ ವಿಫಲಗೊಂಡಿದೆ. ನಲ್ಲಿಗಳಲ್ಲಿ ನೀರು ಬರುತ್ತಿಲ್ಲ. ಈ ಕಾಮಗಾರಿ ಕಾರಣದಿಂದ ಗ್ರಾಮಗಳಲ್ಲಿನ ರಸ್ತೆಗಳು ಹದಗಟ್ಟಿವೆ. ಕೂಡಲೇ ಸರಿಪಡಿಸುವ ಕಾರ್ಯವಾಗಬೇಕಿದೆ. ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆಯಾ ಗ್ರಾಪಂ ಸುಪರ್ದಿಗೆ ಒಪ್ಪಿಸುವುದರಿಂದ ನೀರು ಸರಬರಾಜು ಯೋಜನೆ ಸಫಲವಾಗುತ್ತದೆ. ಆ ನಿಟ್ಟಿನಲ್ಲಿ ತಾಪಂ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಶಿಥಿಲಗೊಂಡಿರುವ ಶಾಲಾ ಹಾಗೂ ಅಂಗನವಾಡಿ ಕಟ್ಟಡ ದುರಸ್ತಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಇಲಾಖೆ ಅಧಿಕಾರಿಗಳಿಗೆ ಹೇಳಿದರು. ಕಿತ್ತೂರಿಗೆ ಹತ್ತಿರವಾಗುವಂತೆ ಹೆದ್ದಾರಿಯಿಂದ 500 ಮೀಟರ್ ಅಂತರದಲ್ಲಿಯೇ ತಾಲೂಕು ಕ್ರೀಡಾಂಗಣ ನಿರ್ಮಿಸುವ ಯೋಜನೆ ಹೊಂದಿದ್ದು, ಅದಕ್ಕಾಗಿ ಭೂಮಿ ಕೂಡ ಗುರುತಿಸಲಾಗಿದೆ. ಆರ್‌ಟಿಒ ಅಧಿಕಾರಿಗಳು ಗ್ರಾಮೀಣ ಪ್ರದೇಶದಲ್ಲಿ ಲೈಸನ್ಸ್ ಜಾಗೃತಿ ಮೂಡಿಸಬೇಕು. ಅಕ್ರಮ ಸಾರಾಯಿ ಮಾರಾಟ ಹೆಚ್ಚಾಗಿ ಗಲಾಟೆಗಳು ಹೆಚ್ಚಾಗಿದ್ದು, ಅಬಕಾರಿ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದೇಕೆ ಎಂದು ಪ್ರಶ್ನಿಸಿದರು.

ತಾಪಂ ಇಒ ಸುಭಾಷ ಸಂಪಗಾವಿ ಮಾತನಾಡಿ, ಎಲ್ಲ ಗ್ರಾಪಂಗಳಲ್ಲಿ ಗೃಹಲಕ್ಷ್ಮೀ ಯೋಜನೆ ಉದ್ಘಾಟನೆ ಕಾರ್ಯಕ್ರಮ ವೀಕ್ಷಿಸಲು ಅನುಕೂಲವಾಗುವಂತೆ ನೋಡಲ್ ಅಧಿಕಾರಿಗಳು ವ್ಯವಸ್ಥೆ ಮಾಡಬೇಕು ಎಂದರು. ತಹಸೀಲ್ದಾರ್ ರವಿ ಹಾದಿಮನಿ ಹಾಗೂ ತಾಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದು, ಇಲಾಖೆ ಪ್ರಗತಿ ವಿವರಿಸಿದರು. ಅದಕ್ಕೂ ಮುನ್ನ 10 ಅಂಗವಿಕಲರಿಗೆ ಶಾಸಕರು ಮೂರು ಚಕ್ರದ ವಾಹನ ವಿತರಿಸಿದರು.