ಜಿಲ್ಲೆ

ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿಸಲು ಕ್ರಮ

ವಿಜಯವಾಣಿ ಸುದ್ದಿಜಾಲ ಧಾರವಾಡ
ಹಲವು ದಶಕಗಳಿಂದ ಅರಣ್ಯದಲ್ಲಿದ್ದು ಜೀವನ ಸಾಗಿಸುತ್ತಿರುವ ಧಾರವಾಡ ಹಾಗೂ ಅಳ್ನಾವರ ತಾಲೂಕಿನ ಕೆಲ ಜನ ವಸತಿಗಳಿಗೆ ಮೂಲ ಸೌಕರ್ಯ ಒದಗಿಸುವುದಲ್ಲದೆ, ಆ ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ತ್ವರಿತವಾಗಿ ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಲು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಅಧಿಕಾರಿಗಳಿಗೆ ಸೂಚಿಸಿದರು.
ಗೌಳಿ ಸಮಾಜದ ಸಮಸ್ಯೆ ಪರಿಹರಿಸಲು ಹಾಗೂ ಫಾರ್ಮಿಂಗ್ ಸೊಸೈಟಿ ಜಮೀನು ಸಾಗುವಳಿದಾರರ ಕುರಿತು ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಶಿವನಗರ, ರೇಣುಕಾನಗರ, ಟಿ.ಆರ್. ನಗರ, ಲಿಂಗನಕೊಪ್ಪ, ಕೊಕ್ಕೆರೆವಾಡ, ಉಡವನಾಗಲಾವಿ, ಹುಣಸಿ ಕುಮರಿ, ಜನವಸತಿ ಪ್ರದೇಶಗಳನ್ನು ಶೀಘ್ರ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ಮೂಲ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಅಳ್ನಾವರ ಮಾರ್ಗದಲ್ಲಿ ರಸ್ತೆಗೆ ಹೊಂದಿಕೊಂಡಿರುವ ಶಿವನಗರ ಗೌಳಿ ವಾರ್ಡ್‌ದಲ್ಲಿ 4 ದಶಕಗಳಿಂದ ಗೌಳಿಗರು ವಾಸಿಸುತ್ತಿದ್ದು, ಅವರಿಗೆ ಸೌಕರ್ಯ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ. ಗೌಳಿವಾಡ ಕಂದಾಯ ಗ್ರಾಮ ಘೋಷಣೆಗೆ ಅರ್ಹವಾಗಿದ್ದು, ಗ್ರಾಮ ಸಭೆ ಹಾಗೂ ಗ್ರಾಮ ಅರಣ್ಯ ಹಕ್ಕು ಸಮಿತಿ ಸಭೆಗಳಲ್ಲಿ ಠರಾವು ಆದಂತೆ ತಕ್ಷಣ ಉಪವಿಭಾಗಾಧಿಕಾರಿಗೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ಹೇಳಿದರು.
ರೇಣುಕಾನಗರದಲ್ಲಿ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಸೂಚಿಸಿದ ಸಚಿವರು, ನೀರಿನ ಟ್ಯಾಂಕ್ ಹಾಗೂ ಜಲಜೀವನ ಮಿಷನ್ ಕಾರ್ಯ ಪೂರ್ಣಗೊಳಿಸಿ ನೀರು ಸರಬರಾಜಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸೂಚಿಸಿದರು. ಲಿಂಗನಕೊಪ್ಪ, ಮಡಿಕೆಕೊಪ್ಪ, ಕಿವುಡೇ ಬೆಲ್ ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಈಗಾಗಲೇ ಕ್ರಮ ಕೈಗೊಳ್ಳುತ್ತಿರುವುದಾಗಿ ಸಭೆಗೆ ತಿಳಿಸಿದರು.
ಕಲಘಟಗಿ, ಅಳ್ನಾವರ, ಧಾರವಾಡ ತಾಲೂಕಿನಲ್ಲಿ ಸರ್ಕಾರಿ ಭೂಮಿಯನ್ನು ಗುತ್ತಿಗೆಗೆ ಪಡೆದು ನಿಯಮಾನುಸಾರ ಸದ್ಯ ಸಾಗುವಳಿ ಮಾಡುತ್ತಿರುವ ರೈತರ ಹೆಸರಿಗೆ ಖಾತಾ ಮಾಡುವಂತೆ ಸಚಿವರು ಹಿಂದಿನ ಸಭೆಯಲ್ಲಿ ಸೂಚಿಸಿದ್ದರು. ಸದ್ಯ ಫಾರ್ಮಿಂಗ್ ಸೊಸೈಟಿಗಳು ಅಸ್ತಿತ್ವ ಕಳೆದುಕೊಂಡಿದ್ದು, ಸಾಗುವಳಿ ಮಾಡುತ್ತಿರುವ ರೈತರಿಗೆ ಜಮೀನು ಮಾಲಿಕತ್ವ ನೀಡುವ ಪ್ರಕ್ರಿಯೆ ಆರಂಭಿಸಲಾಗುವುದು. ಸೊಸೈಟಿ ಆ್ಯಕ್ಟ್‌ನಲ್ಲಿ ರೈತರಿಗೆ ನಮೂನೆ 57ರಲ್ಲಿ ಅರ್ಜಿಗಳನ್ನು ಸಲ್ಲಿಸಲು ಸೂಚಿಸಲಾಗಿದೆ. ಅವುಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಉಪವಿಭಾಗಾಧಿಕಾರಿ ಅಶೋಕ ತೇಲಿ, ಡಿಎಫ್‌ಒ ಸೋನಲ್ ವೃಷ್ಣಿ, ಎಎಸಿಎಫ್ ಪರಿಮಳ ಹುಲಗಣ್ಣವರ, ದೊಡ್ಡಪ್ಪ ಹೂಗಾರ, ಪರಶುರಾಮ ಸಾವಂತ, ಸಂತೋಷ ಕುಮಾರ ತಳಕಲ್, ಅಧಿಕಾರಿಗಳು, ಇತರರು ಇದ್ದರು.