ಸಿದ್ದಾಪುರ: ಸಿದ್ದಾಪುರ ಪಟ್ಟಣ ವ್ಯಾಪ್ತಿಯ ತ್ಯಾಜ್ಯಗಳನ್ನು ಶುಕ್ರವಾರ ಗ್ರಾಮ ಪಂಚಾಯಿತಿಯು ಬಾಡಿಗೆ ವಾಹನದಲ್ಲಿ ತುಂಬಿಸಿಕೊಂಡು ಹೋಗಿ ಸಿದ್ದಾಪುರದ ಜನವಸತಿ ಪ್ರದೇಶದ ಮಾರುಕಟ್ಟೆಯಲ್ಲಿ ಸುರಿಯುತ್ತಿರುವುದನ್ನು ಗಮನಿಸಿದ ಸಿದ್ದಾಪುರದ ಗ್ರಾ.ಪಂ. ಮಾಜಿ ಸದಸ್ಯ ಹುಸೇನ್ ಅವರು ವಾಹನ ತಡೆದು ಕಸ ವಿಲೇವಾರಿ ಮಾಡುತ್ತಿದ್ದದನ್ನು ತಡೆಗಟ್ಟಿದರು.
ನಂತರ ಸ್ಥಳಕ್ಕೆ ಗ್ರಾ.ಪಂ.ಉಪಾಧ್ಯಕ್ಷ ಹಾಗೂ ಸದಸ್ಯರನ್ನು ಕರೆಸಿಕೊಂಡು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದರು. ಜನವಸತಿ ಪ್ರದೇಶದಲ್ಲಿ ಕಸ ಸುರಿಯುತ್ತಿರುವ ಬಗ್ಗೆ ಪ್ರಶ್ನಿಸಿದ ಹುಸೇನ್ ಅವರು ಈ ಭಾಗದಲ್ಲಿ ಈ ಹಿಂದೆ ಸಾಂಕ್ರಾಮಿಕ ರೋಗ ನಿವಾಸಿಗಳು ಸಮಸ್ಯೆಗೆ ಸಿಲುಕಿಕೊಂಡಿದ್ದರು. ಇದರ ಅರಿವು ಇದ್ದರೂ ಕೂಡ ಗ್ರಾಮ ಪಂಚಾಯಿತಿ ನಿರ್ಲಕ್ಷೃ ವಹಿಸಿ ಅಸಡ್ಡೆಯಿಂದ ವರ್ತಿಸುತ್ತಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಸಿದ್ದಾಪುರದ ಕಸ ವಿಲೇವಾರಿಗೆ ಸೂಕ್ತ ಜಾಗವನ್ನು ಗುರುತಿಸದೆ ಗ್ರಾಮ ಪಂಚಾಯಿತಿಯು ಜನವಸತಿ ಪ್ರದೇಶಗಳಲ್ಲಿ ಕಸ ಸುರಿದು ಕೈ ತೊಳೆದುಕೊಳ್ಳುತ್ತಿದೆ. ಕಸವಿಲೇವಾರಿ ಮಾಡಲು ಎರಡು ಸ್ವಂತ ವಾಹನಗಳಿದ್ದರೂ ಕೂಡ ಬಾಡಿಗೆ ವಾಹನದಲ್ಲಿ ಕಸ ತ್ಯಾಜ್ಯಗಳನ್ನು ಚೀಲದಲ್ಲಿ ತುಂಬಿ ವಿಲೇವಾರಿ ಮಾಡುತ್ತಿರುವುದು ಏಕೆ ಎಂದು ಪ್ರಶ್ನಿಸಿದ ಅವರು, ಕಸವಿಲೇವಾರಿ ಹೆಸರಿನಲ್ಲಿ ಲಕ್ಷಾಂತರ ರೂ. ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ.
ಕೂಡಲೇ ಪಟ್ಟಣ ವ್ಯಾಪ್ತಿಯ ಕಸ ವಿಲೇವಾರಿ ಮಾಡಲು ಸೂಕ್ತ ಜಾಗವನ್ನು ಗುರುತಿಸಿ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಸಾರ್ವಜನಿಕರ ಸಹಕಾರದಿಂದ ಪಂಚಾಯಿತಿಯ ವಿರುದ್ಧ ಹೋರಾಟ ಮಾಡಲಾಗುವುದೆಂದು ಹುಸೇನ್ ಎಚ್ಚರಿಕೆ ನೀಡಿದ್ದಾರೆ.