ಜಿಲ್ಲೆ

ಜನವರಿ 14, 15ರಂದು ಕೋವಿ ಉತ್ಸವ

ನಾಪೋಕ್ಲು: ನೆಲಜಿ ಫಾರ್ಮರ್ಸ್ ಕ್ಲಬ್ ವತಿಯಿಂದ ಕೊಡವ ಕೌಟುಂಬಿಕ ಕೋವಿ ಉತ್ಸವವನ್ನು ಮುಂದಿನ ಜನವರಿ 14, ಮತ್ತು 15ರಂದು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಮಂಡಿರ ನಂದ ನಂಜಪ್ಪ ತಿಳಿಸಿದರು.


ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಕೋವಿ ಉತ್ಸವ ಆಯೋಜಿಸಲಾಗುತ್ತಿದ್ದು ಸ್ಪರ್ಧೆಯು ಪ್ರತಿ ಕೊಡವ ಕುಟುಂಬಗಳ ನಡುವೆ ನಡೆಯಲಿದೆ. ಸ್ಪರ್ಧೆಗೆ ಕೊಡವ ಉಡುಪು ಧರಿಸಿ ಪಾಲ್ಗೊಳ್ಳುವುದು ಕಡ್ಡಾಯ. 0.22 ಮತ್ತು 12 ಬೋರ್ ಎರಡು ವಿಭಾಗಗಳಲ್ಲಿ ಪ್ರತ್ಯೇಕ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಪ್ರತಿ ವಿಭಾಗದಲ್ಲಿ ವಿಜೇತರಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ವಿತರಿಸಲಾಗುವುದು. ಜಿಲ್ಲೆಯಲ್ಲಿ 853 ಕೊಡವ ಕುಟುಂಬಗಳಿದ್ದು ಎಲ್ಲ ಕುಟುಂಬಸ್ಥರು ಸ್ಪರ್ಧೆಯಲ್ಲಿ ಪಾಲ್ಗೊಂಡು ಸಂಪ್ರದಾಯ ಉಳಿಸಲು ಸಹಕರಿಸಬೇಕು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.


ಖಜಾಂಜಿ ಚೀಯಕಪೂವಂಡ ನವೀನ್ ನಾಚಪ್ಪ, ನಿರ್ದೇಶಕರಾದ ಮಾಳೆಯಂಡ ವಿಜು ಅಪ್ಪಚ್ಚ, ಮಾಳೆಯಂಡ ವಿಜು ವಿಜಯ್, ಅಪ್ಪುಮಣಿಯಂಡ ಕಿಸುಮೇದಪ್ಪ, ಸದಸ್ಯ ಮಾಳೆಯಂಡ ಅಪ್ಪಣ್ಣ ಇದ್ದರು.