ಹಾಸನ : ಸಾರ್ವಜನಿಕರು ತಮ್ಮ ಕಷ್ಟ ಹೇಳಿಕೊಳ್ಳಲು ಠಾಣೆಗೆ ಬಂದಾಗ ಅವರೊಂದಿಗೆ ಪೊಲೀಸರು ಸಹಾನುಭೂತಿಯಿಂದ ವರ್ತಿಸಬೇಕು ಮತ್ತು ಅವರಿಗೆ ನ್ಯಾಯವನ್ನು ಒದಗಿಸಿಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಸೂಚಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾ ಪೊಲೀಸ್ ವ್ಯವಸ್ಥೆ ಬಗ್ಗೆ ನನಗೆ ಅಪಾರ ನಂಬಿಕೆ, ವಿಶ್ವಾಸವಿದೆ. ಅದನ್ನು ಹೀಗೆಯೇ ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳು ಹಾಗು ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಪರಿಣಾಮಕಾರಿ ಜಾರಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಶ್ರಮಿಸಬೇಕು. ಪೊಲೀಸ್ ಠಾಣೆಗೆ ಬಂದವರನ್ನು ಕೂರಿಸಿ, ತಾಳ್ಮೆಯಿಂದ ಸಮಸ್ಯೆ ಆಲಿಸಿ ನ್ಯಾಯಸಮ್ಮತ ಕ್ರಮಗಳನ್ನು ಸಕಾಲದಲ್ಲಿ ಕೈಗೊಳ್ಳಬೇಕು. ಆಗ ಮಾತ್ರವೇ ಜನರಿಗೆ ಪೊಲೀಸ್ ಇಲಾಖೆ ಬಗ್ಗೆ ನಂಬಿಕೆ ಮೂಡುತ್ತದೆ. ಇಲಾಖೆಯ ತಳಮಟ್ಟದ ಸಿಬ್ಬಂದಿಗೆ ಸಾರ್ವಜನಿಕ ವಲಯದ ಮಾಹಿತಿ ಹೆಚ್ಚಿರುತ್ತದೆ. ಅದನ್ನು ಬಳಸಿಕೊಂಡು ಅಧಿಕಾರಿಗಳು ಪರಿಹಾರಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ ಸೂಕ್ತ ಪ್ರಾಧಿಕಾರಕ್ಕೆ ಮಾಹಿತಿ ರವಾನಿಸಬೇಕು. ಮಾದಕ ವಸ್ತುಗಳ ಸಾಗಾಣಿಕೆ, ಬಳಕೆ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕಿದ್ದು, ಯುವ ಸಮುದಾಯ ದಾರಿ ತಪ್ಪದಂತೆ ಎಚ್ಚರ ವಹಿಸಿ, ಅಕ್ರಮಗಳನ್ನು ನಿಗ್ರಹಿಸುವುದು ಪೊಲೀಸರ ಕರ್ತವ್ಯವಾಗಬೇಕು ಎಂದರು.
ಅಪರಾಧ ನಿಯಂತ್ರಣಕ್ಕೆ ಕ್ರಮ ವಹಿಸಿ:
ಬಾಲ್ಯ ವಿವಾಹ ತಡೆ ಹಾಗೂ ಮಾನವ ಕಳ್ಳ ಸಾಗಾಣಿಕೆ ಸಂಪೂರ್ಣ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಮಿಕರಿಗೆ ಸೌಕರ್ಯ ಒದಗಿಸಲಾಗುತ್ತಿದೆಯೇ, ಇಲ್ಲವೇ ಎಂಬುದನ್ನು ಗಮನಿಸಬೇಕು. ನಿಯೋಜಿತರ ಬದಲು ಅವರ ತಂದೆ-ತಾಯಿ, ಮಕ್ಕಳು ಅಥವಾ ಕುಟುಂಬ ಸದಸ್ಯರು ಬಂದು ಕೆಲಸ ಮಾಡುವ ಪ್ರಕರಣಗಳು ಇರುವ ಸಾಧ್ಯತೆಗಳಿದ್ದು ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾತನಾಡಿ, ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಸ್ವರೂಪ, ಅನುಷ್ಠಾನಗೊಂಡಿರುವ ಯೋಜನೆಗಳ ಪ್ರಗತಿ, ಜನಸ್ನೇಹಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಕೆ.ತವ್ಮ್ಮಯ್ಯ, ಡಿವೈಎಸ್‌ಪಿ ಮಿಥುನ್, ಉದಯ ಭಾಸ್ಕರ್ ಇತರರಿದ್ದರು.