ಜಿಲ್ಲೆ

ಜನರು ಸಮಸ್ಯೆ ಹೇಳಿಕೊಳ್ಳಲು ವೆಬ್‌ಸೈಟ್ ಅಭಿವೃದ್ಧಿ

ವಿರಾಜಪೇಟೆ: ವಿರಾಜಪೇಟೆ ಕ್ಷೇತ್ರದ ಜನರು ಸಮಸ್ಯೆಗಳನ್ನು ಹೇಳಿಕೊಳ್ಳಲು ವೆಬ್‌ಸೈಟ್ ಅಭಿವೃದ್ಧಿಪಡಿಸಲಾಗಿದೆ ಎಂದು ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.


ವಿರಾಜಪೇಟೆಯ ಪುರಭವನದಲ್ಲಿ ನಗರ ಕಾಂಗ್ರೆಸ್‌ನಿಂದ ಭಾನುವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ವಿರಾಜಪೇಟೆ ಹಾಗೂ ಪೊನ್ನಂಪೇಟೆಯ ವಿವಿಧ ಭಾಗಗಳಿಂದ ತಮ್ಮ ಸಮಸ್ಯೆ ಹೇಳಿಕೊಳ್ಳಲು ಜನರು ಪ್ರತಿದಿನ ವಿರಾಜಪೇಟೆಗೆ ಬರುತ್ತಾರೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಅಹವಾಲು ಆಲಿಸಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಅರಿತು ಎ.ಎಸ್.ಪೊನ್ನಣ್ಣ.ಕಾಮ್ ವೆಬ್‌ಸೈಟ್ ಅಭಿವೃದ್ಧಿ ಪಡಿಸಿದ್ದು, ಕಾರ್ಯಾರಂಭ ಮಾಡಿದೆ. ಇದರ ಮೂಲಕ ವಾಯ್ಸ ಮೆಸೇಜ್ ಅಥವಾ ಇ ಮೇಲ್ ಅಥವಾ ಚಾಟಿಂಗ್ ಮೂಲಕ ಸಮಸ್ಯೆಯನ್ನು ಹೇಳಿಕೊಳ್ಳಬಹುದು. ಬಳಿಕ ಅದನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಕಳುಹಿಸಿ ಸಮಸ್ಯೆಗೆ ಪೂರಕ ಸ್ಪಂದನೆ ನೀಡಲಾಗುವುದು ಎಂದು ಭರವಸೆ ನೀಡಿದರು.


ಜತೆಗೆ ಕ್ಷೇತ್ರದಲ್ಲಿ ಯಾವ ಕಾಮಾಗಾರಿ ಎಲ್ಲಿ ನಡೆಯುತ್ತಿದೆ? ಅದರ ವೆಚ್ಚ ಎಷ್ಟು? ಗುತ್ತಿಗೆದಾರ ಯಾರು ಎನ್ನುವ ಮಾಹಿತಿಯನ್ನು ಪಡೆದುಕೊಳ್ಳುವ ವ್ಯವಸ್ಥೆಯನ್ನು ಅತಿ ಶೀಘ್ರದಲ್ಲೇ ಮಾಡಲಾಗುವುದು ಎಂದರು.


ಸದ್ಯದಲ್ಲೇ ಶಾಸಕರ ಕಚೇರಿಯಿಂದ ಸಹಾಯವಾಣಿ ನಂಬರ್ ಕಾರ್ಯ ನಿರ್ವಹಿಸಲ್ಲಿದ್ದು, ದೂರಾವಾಣಿ ಮುಖಾಂತರವೂ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು ಎಂದರು.


ಎಲ್ಲರ ರಕ್ತವೂ ಒಂದೇ. ರಕ್ತಕ್ಕೆ ಧರ್ಮ, ಜಾತಿ, ಬಣ್ಣದ ಹಂಗಿಲ್ಲ ಎನ್ನುವ ಸಂದೇಶ ಸಾರುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು.


ನಗರ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ವಿರಾಜಪೇಟೆ ಪುರಸಭಾ ಸದಸ್ಯರು ಸೇರಿ ವಿರಾಜಪೇಟೆಯಲ್ಲಿ ಮಳೆಗಾಲದಲ್ಲಿ ಅಥವಾ ಇನ್ನಿತರ ಸಂದರ್ಭದಲ್ಲಿ ತೊಂದರೆಗೆ ಸಿಲುಕಿದ ಸಾರ್ವಜನಿಕರ ನೆರವಿಗೆ ಧಾವಿಸಲು ಮಾಡಿಕೊಂಡಿರುವ ಟೀಮ್ ಎಎಸ್‌ಪಿ ತಂಡದ ಲೋಗೋವನ್ನು ಬಿಡುಗಡೆ ಮಾಡಲಾಯಿತು.
ಇದೇ ಸಂದರ್ಭ ಕಾರ್ಯಕರ್ತರೊಂದಿಗೆ ಕೇಕ್ ಕತ್ತರಿಸಿ ಸರಳವಾಗಿ ತಮ್ಮ ಹುಟ್ಟು ಹಬ್ಬವನ್ನು ದಿನವನ್ನು ಆಚರಿಸಿಕೊಂಡರು.
ಕಾಂಚನಾ ಪೊನ್ನಣ್ಣ, ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸಂಕೇತ್ ಪೂವಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ ಇತರರು ಇದ್ದರು.