ಆನೇಕಲ್: ಕರೊನಾದಿಂದ ಸಾಕಷ್ಟು ಕುಟುಂಬಗಳು ಬೀದಿಗೆ ಬೀಳಲು ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೇಜವಾಬ್ದಾರಿಯೇ ಕಾರಣ ಎಂದು ಸಂಸದ ಡಿ.ಕೆ. ಸುರೇಶ್ ಆರೋಪಿಸಿದರು.
ಜಿಗಣಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್ ಕಚೇರಿ ಉದ್ಘಾಟನೆ ಹಾಗೂ ಕರೊನಾ ವಾರಿಯರ್ಸ್‌ಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರೊನಾ ಮೊದಲ ಅಲೆ ಬಂದಾಗಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ, ಬೇಜವಾಬ್ದಾರಿಯಾಗಿ ವರ್ತಿಸಿದ್ದರಿಂದಲೇ ಬಹಳಷ್ಟು ಕುಟುಂಬಗಳು ಆಧಾರಸ್ತಂಭವನ್ನೇ ಕಳೆದುಕೊಂಡು ಬೀದಿಪಾಲಾಗಿವೆ ಎಂದು ದೂರಿದರು.
ಸರ್ಕಾರ ಸುಖಾಸುಮ್ಮನೆ ಪ್ಯಾಕೇಜು ಘೋಷಣೆ ಮಾಡಿ ಜನರು ಕಣ್ಣೊರೆಸುವ ತಂತ್ರ ಅನುಸರಿಸುತ್ತಿದೆ. ಅರ್ಹರಿಗೆ ಯಾವುದೇ ಹಣ ಸಂದಾಯವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ 23 ಕೋಟಿಗೂ ಅಧಿಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ರಾಜ್ಯದಲ್ಲಿ 26 ಲಕ್ಷಕ್ಕೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಇವನ್ನೆಲ್ಲ ಸರಿಪಡಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಲಕ್ಷ್ಯವಹಿಸಿದ್ದಾರೆ ಎಂದು ದೂರಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮಾತನಾಡಿ, ವಿಧಾನಸಭೆ ಚುನಾವಣೆಗೆ ಇನ್ನೆರಡು ವರ್ಷ ಬಾಕಿಯಿದೆ. ಪಕ್ಷದ ಸಂಘಟನೆಗೆ ಒತ್ತು ನಿಡಲಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಬರುವುದು ನಿಶ್ಚಿತ. ಆಗ ಯಾರು ಸಿಎಂ ಆಗಬೇಕು ಎಂಬುದನ್ನು ಪಕ್ಷದ ವರಿಷ್ಠರು ಮತ್ತು ಶಾಸಕರು ನಿರ್ಧರಿಸುತ್ತಾರೆ. ನಾನು ಯಾವ ರೇಸ್‌ನಲ್ಲೂ ಇಲ್ಲ ಎಂದು ತಿಳಿಸಿದರು.
ಮುಖಂಡ ಆರ್.ಕೆ. ರಮೇಶ್ ಮಾತನಾಡಿ, ತೈಲಬೆಲೆ ನೂರರ ಗಡಿ ದಾಟಿದ್ದು ದಿನನಿತ್ಯ ಬಳಸುವ ವಸ್ತುಗಳು ಗಗನಕ್ಕೇರಿದೆ. ಬಿಜೆಪಿಯವರ ದುರಾಡಳಿತದಿಂದ ಜನ ಬೇಸತ್ತಿದ್ದಾರೆ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ, ಮುಖಂಡರಾದ ಆರ್.ಕೆ. ರಮೇಶ್, ಆನಂದ ಗೌಡ, ಮಧು ಗೌಡ, ಫ್ಯಾನ್ಸಿ ರಮೇಶ್ ,ಆರ್.ಕೆ. ಕೇಶವರೆಡ್ಡಿ, ಶ್ರೀಧರ್, ಮುನಿಯಪ್ಪ ಮತ್ತಿತರರು ಇದ್ದರು.