ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ಮೇ 20ರಂದು ಬೃಹತ್ ಸಾಧನಾ ಸಮಾವೇಶ ಏರ್ಪಡಿಸಲಾಗಿದೆ ಎಂದು ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸಮಾವೇಶಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ಗಾಂಧಿ ಸೇರಿ ಪಕ್ಷದ ಹಲವು ಹಿರಿಯ ನಾಯಕರು, ಸಿಎಂ, ಡಿಸಿಎಂ, ಸಂಪುಟದ ಸದಸ್ಯರು ಭಾಗವಹಿಸುತ್ತಿದ್ದಾರೆ. ಸಮಾವೇಶದ ಯಶಸ್ಸಿಗೆ ಸರ್ಕಾರ ಮತ್ತು ಕಾಂಗ್ರೆಸ್ ಶ್ರಮಿಸುತ್ತಿದೆ. ಇದಕ್ಕಾಗಿ ಸಚಿವರು ಹಾಗೂ ಹಿರಿಯ ಶಾಸಕರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.
ಸಮಾವೇಶದಲ್ಲಿ ಒಂದು ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗುತ್ತಿದೆ. ಸಚಿವರು, ಶಾಸಕರು ಕಂದಾಯ ಗ್ರಾಮಗಳಾಗಿ ಪರಿವರ್ತಿತವಾಗಿರುವ ಜನವಸತಿಗಳಿಗೆ ತೆರಳಿ ಪರಿಶೀಲಿಸಿ ಫಲಾನುಭವಿಗಳನ್ನು ಸಮಾವೇಶಕ್ಕೆ ಕರೆ ತರಬೇಕು. ಆಯ್ದ ಫಲಾನುಭವಿಗಳಿಗೆ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಹಕ್ಕು ಪತ್ರ ವಿತರಿಸಲಿದ್ದಾರೆ ಎಂದರು.
ಸರ್ಕಾರದ ಈ ಕಾರ್ಯಕ್ರಮಕ್ಕೆ ಫಲಾನುಭವಿಗಳನ್ನು ಕರೆ ತರುವಂತೆ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕು. ಜನರಿಗೆ ಸರ್ಕಾರದ ಸಾಧನೆ ಮನವರಿಕೆ ಮಾಡಿಕೊಡಬೇಕಾದ ಹೊಣೆ ಸಚಿವರು, ಶಾಸಕರು, ಮುಖಂಡರ ಮೇಲಿದೆ ಎಂದು ಹೇಳಿದರು.
ಐದು ಗ್ಯಾರಂಟಿಗಳಿಂದಾಗಿ ಒಂದು ಕೋಟಿ ಜನರು ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ. ಸಮಾವೇಶದಲ್ಲಿ ಎರಡು ಲಕ್ಷ ಹಾಗೂ ಚಿತ್ರದುರ್ಗ ಜಿ ಲ್ಲೆಯಿಂದ ಅಂದಾಜು 10 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಬಿಜೆಪಿ ಸಂವಿಧಾನ ಬದಲಾಯಿಸುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದ ಅವರು, ಇದನ್ನು ಪ್ರತಿ ಮನೆ, ಮನೆಗೆ ನಮ್ಮ ಕಾರ್ಯಕರ್ತರು ಹೋಗಿ ತಿಳಿಸಬೇಕಿದೆ. ಸಂವಿಧಾನ ರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಸಿಬಿಐ, ಇಡಿ, ಐಟಿ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗ ಮಾಡಿಕೊಳ್ಳುತ್ತಿರುವುದನ್ನೂ ತಿಳಿಸಬೇಕು. ಜಿಪಂ, ತಾಪಂ ಚುನಾವಣೆಗೆ ಕಾರ್ಯಕರ್ತರು ಸಜ್ಜಾಗಬೇಕು ಎಂದು ತಿಳಿಸಿದರು.
ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಭಾಗವಹಿಸಬೇಕು ಎಂದು ವಿನಂತಿಸಿದರು.
ಶಾಸಕ ಕೆ.ಸಿ. ವೀರೇಂದ್ರಪಪ್ಪಿ ಮಾತನಾಡಿ, ಹೊಸಪೇಟೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸರ್ಕಾರದ ಎರಡು ವರ್ಷಗಳ ಸಾಧನೆಯ ಸಂಭ್ರಮಾಚರಣೆ ನಡೆಯಲಿದೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಹನುಮಲಿ ಷಣ್ಮುಖಪ್ಪ, ರಾಘವೇಂದ್ರ, ಮಾಜಿ ಎಂಎಲ್‌ಸಿ ಜಯಮ್ಮ ಬಾಲರಾಜ್, ಜಿಲ್ಲಾಧ್ಯಕ್ಷ ಎಂ.ಕೆ. ತಾಜ್‌ಪೀರ್, ಕಾರ್ಯಾಧ್ಯಕ್ಷ ಹಾಲಸ್ವಾಮಿ, ಜಿಲ್ಲಾ ಕೆಡಿಪಿ ಸದಸ್ಯ ಕೆ.ಸಿ. ನಾಗರಾಜ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್. ಶಿವಣ್ಣ, ಸಂಪತ್‌ಕುಮಾರ್, ಡಿ.ಎನ್. ಮೈಲಾರಪ್ಪ, ಗೀತಾನಂದಿನಿಗೌಡ, ಲಕ್ಷ್ಮೀಕಾಂತ, ಎಸ್. ಜಯಣ್ಣ, ಜಿ.ಎಸ್. ಕುಮಾರ್‌ಗೌಡ, ಮಧುಗೌಡ, ನಜ್ಮಾತಾಜ್, ಎನ್.ಡಿ.ಕುಮಾರ್, ಕಾರೇಹಳ್ಳಿ ಉಲ್ಲಾಸ್, ಮಹಡಿ ಶಿವಮೂರ್ತಿ, ಸೈಯದ್‌ಖುದ್ದೂಸ್, ಪ್ರಕಾಶ್‌ರಾಮನಾಯ್ಕ, ಮುದಸಿರ್‌ನವಾಜ್, ಮಂಜುನಾಥ್, ಮುನೀರಾಮಕಂದರ್, ಮೆಹಬೂಬ್ ಖಾತೂನ್, ರಾಜಣ್ಣ ಮತ್ತಿತರರು ಇದ್ದರು.