ಹಾಸನ: ನಾಗರಿಕ ಸಮಾಜದ ಜನತೆಗೆ ಬೇಕಾಗಿರುವುದು ರಕ್ತ ಕ್ರಾಂತಿ ಅಲ್ಲ ಜಲಕ್ರಾಂತಿ. ಈ ರಕ್ತ ಕ್ರಾಂತಿ ಮಾಡುವುದು ಬಿಟ್ಟು ಅರಸೀಕೆರೆಗೆ ಅವಶ್ಯಕತೆ ಬೇಕಾಗಿರುವುದು ಜಲ ಕ್ರಾಂತಿ ಮಾಡಿ ಎಂದು ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ಅವರು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿಕೆಗೆ ತಿರುಗೇಟು ನೀಡಿದರು.
ಈ ಸರ್ಕಾರಕ್ಕೆ ಏನಾದರೂ ತೊಂದರೆಯಾದರೆ ರಕ್ತ ಕ್ರಾಂತಿಯಾಗುತ್ತದೆ ಎಂದು ಶಾಸಕ ಶಿವಲಿಂಗೇಗೌಡರು ಹೇಳುತ್ತಾರೆ. ಎತ್ತಿನ ಹೊಳೆ ಯೋಜನೆಯಲ್ಲಿ ಬಾಂಬ್ ಹಾಕಿ ಜಮೀನು ಬಿಡಿಸಿಕೊಳ್ಳುವುದಾಗಿ ಕೆಲ ದಿನಗಳ ಹಿಂದೆ ಕೆಡಿಪಿ ಸಭೆಯಲ್ಲಿ ಹೇಳಿದ್ದಾರೆ. ನಿಮ್ಮ ಪರಿಸ್ಥಿತಿ ನಮಗೆ ಅರ್ಥವಾಗುತ್ತದೆ. ಮಂತ್ರಿ ಆಗಲೇಬೇಕೆನ್ನುವ ಉದ್ದೇಶದಿಂದ ಇಷ್ಟೆಲ್ಲಾ ಹೇಳಿಕೆ ನೀಡುತ್ತಿದ್ದಿರಾ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.
ಅರಸೀಕೆರೆ ತಾಲೂಕು ನೀರಾವರಿಯಿಂದ ವಂಚಿತರಾಗಿದ್ದೇವೆ. ಹೇಮಾವತಿ ನದಿ ಹುಟ್ಟಿದ ಜಿಲ್ಲೆಯಲ್ಲಿ ಇದ್ದರೂ ಕೂಡ ಕಾವೇರಿ, ಕೃಷ್ಣ ನದಿಗಳ ಕಥೆ ಕೇಳಿಕೊಂಡು ಇಷ್ಟು ವರ್ಷ ಬರಗಾಲದ ಬೆಂಗಾಡಲ್ಲಿ ನಮ್ಮ ಜನರು ನರಳುತ್ತಿದ್ದಾರೆ. ದಯಮಾಡಿ ನೀವು ಯಾರಿಗಾಗಿಯೂ ರಕ್ತಕ್ರಾಂತಿ ಮಾಡಬೇಡಿ. ಜಲಕ್ರಾಂತಿ ಮಾಡಿ. ನಾನು ಈವರೆಗೂ ವಿರೋಧ ಪಕ್ಷದಲ್ಲಿದ್ದೆ. ಹೀಗಾಗಿ ಒಬ್ಬ ಶಾಸಕನಾಗಿ ಕ್ಷೇತ್ರಕ್ಕೆ ಹೆಚ್ಚು ಕೆಲಸ ಮಾಡಲು ಆಗಿರಲಿಲ್ಲ ಎಂದು ಹೇಳುತ್ತಿದ್ದಾರೆ. ಈಗ ಅವರದೇ ಸರ್ಕಾರವಿದೆ. ಅಲ್ಲಿ ಇವರು ಕ್ಯಾಬಿನೆಟ್ ದರ್ಜೆಯ ಗೃಹ ಮಂಡಲಿ ಅಧ್ಯಕ್ಷರಾಗಿದ್ದಾರೆ. ಈಗಲಾದರೂ ಕ್ಷೇತ್ರದ ಜನರ ಋಣ ತೀರಿಸಿ ಎಂದು ಅರಸೀಕೆರೆ ಜನತೆ ನಿಮ್ಮನ್ನು ಮನವಿ ಮಾಡಿಕೊಳ್ಳುತ್ತಿದ್ದಾರೆ ಎಂದು ಟಾಂಗ್ ನೀಡಿದರು.
ಮಂತ್ರಿ ಆಗಲೇಬೇಕು ಎನ್ನುವ ಉದ್ದೇಶದಲ್ಲಿ ಎಚ್.ಡಿ. ದೇವೇಗೌಡರ ಬಗ್ಗೆ, ಮಾಜಿ ಸಿಎಂ ಕುಮಾರಣ್ಣ, ರೇವಣ್ಣರ ಬಗ್ಗೆ ಮತ್ತೆ ಏನಾದರೂ ಹಗುರವಾಗಿ ಮಾತನಾಡಿದರೇ ಜನರು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಮೂರು ಬಾರಿ ಜೆಡಿಎಸ್ ಚಿಹ್ನೆಯಿಂದ ಮತ್ತು ಒಂದು ಬಾರಿ ಕಾಂಗ್ರೆಸ್ ಚಿಹ್ನೆಯಿಂದ ಶಾಸಕರಾಗಿದ್ದೀರಿ. ರಾಜಕಾರಣದಲ್ಲಿ ನಿಮಗೂ ಅನುಭವವಿದೆ. ಅರಸೀಕೆರೆ ಮತ್ತು ಹಾಸನಕ್ಕೆ ಕುಮಾರಸ್ವಾಮಿ ಮತ್ತು ದೇವೇಗೌಡರ ಕೊಡುಗೆ ಏನು ಎಂದು ಎದೆ ಮುಟ್ಟಿಕೊಂಡು ಹೇಳಿ ಎಂದು ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಅರಸೀಕೆರೆ ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್, ತಾಲೂಕಿ ಮುಖಂಡರಾದ ಕಾಟೀಕೆರೆ ಮೋಹನ್, ಮೇಲಗಿರಿ ಗೌಡ, ರಮೇಶ್, ರಮೇಶ್ ನಾಯ್ಡ ಇತರರು ಉಪಸ್ಥಿತರಿದ್ದರು.