ಜಿಲ್ಲೆ

ಜನರಿಗೆ ನಿರಾಸೆ ಮಾಡಬೇಡಿ

ಕುಂದು&ಕೊರತೆ ಸಭೆಯಲ್ಲಿ ಲೋಕಾಯುಕ್ತ ಎಸ್ಪಿ ಲಕ್ಷ್ಮೀನಾರಾಯಣ್​ ಸೂಚನೆ

ಪಾವಗಡ: ಸರ್ಕಾರಿ ಇಲಾಖೆಗಳ ಮೇಲೆ ಭಾರಿ ನಿರೀಕ್ಷೆಗಳನ್ನು ಹೊತ್ತುಕೊಂಡು ಬರುವ ಜನರನ್ನು ಯಾವುದೇ ಕಾರಣಕ್ಕೂ ನಿರಾಸೆಗೊಳಿಸಬಾರದು ಎಂದು ಲೋಕಾಯುಕ್ತ ಎಸ್ಪಿ ಲಕ್ಷ್ಮೀನಾರಾಯಣ ತಿಳಿಸಿದರು.

ಪಟ್ಟಣದ ಎಸ್​.ಎಸ್​.ಕೆ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತುಮಕೂರು ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕರ ಕುಂದು&ಕೊರತೆ ಸಭೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಸಾರ್ವಜನಿಕರ ಸಮಸ್ಯೆ ಮತ್ತು ದೂರುಗಳನ್ನು ಪರಿಹರಿಸಲು ಆದ್ಯತೆ ನೀಡಬೇಕು. ಅವರ ಬೇಡಿಕೆಗಳಿಗೆ ಸ್ಪಂದಿಸಬೇಕು. ಸರ್ಕಾರ ಮತ್ತು ಇಲಾಖೆಯ ಕಾರ್ಯನಿರ್ವಹಣೆ ಬಗ್ಗೆ ಜನರು ಹೊಂದಿರುವ ಒಳ್ಳೆಯ ಭಾವನೆ ಕಾಪಾಡಿಕೊಳ್ಳಬೇಕು. ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರಾಮಾಣಿಕತೆ ಮತ್ತು ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು. ಲೋಕಾಯುಕ್ತ ಸಂಸ್ಥೆಯು ಯಾವುದೇ ಕಾರಣಕ್ಕೂ ಭ್ರಷ್ಟಾಚಾರ ಮತ್ತು ದುರಾಡಳಿತ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಸಾರ್ವಜನಿಕ ನಾಗೇಶ್​ ಬಾಬು ದೂರು ನೀಡಿ, ವೈ.ಎನ್​ ಹೊಸಕೋಟೆ ಗ್ರಾಮದ ಸರ್ವೇ ನಂ.245/2 ರಲ್ಲಿ 3 ಎಕರೆಯಲ್ಲಿ ಸಂತೆ ಮೈದಾನವೆಂದು ದಾಖಲಾಗಿದೆ. ಆದರೆ ಕೆಲ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಲೇಔಟ್​ ಮಾಡಿ ನಿವೇಶನ ಮಾಡಿಕೊಂಡು ಮಾರಾಟ ಮಾಡಿದ್ದಾರೆ. ಮನೆಗಳು ಸಹ ಕಟ್ಟಿಕೊಂಡಿದ್ದಾರೆ. ಸಂತೆ ಮೈದಾನ ಉಳಿವಿಗೆ ಅನೇಕ ಭಾರಿ ಗ್ರಾಪಂ ಸೇರಿ ಮೇಲಧಿಕಾರಿಗಳಿಗೂ ದೂರು ಸಲ್ಲಿಸಿದರು ಪ್ರಯೊಜನವಾಗದ ಕಾರಣ ಲೋಕಾಯುಕ್ತರಲ್ಲೊ ಮರು ದೂರು ದಾಖಲಿಸಿದ್ದಾರೆ. ಇದಕ್ಕೆ ಸ್ಪಂದಿಸಿದ ಲೋಕಾಯುಕ್ತ ಎಸ್ಪಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ, ತಾಪಂ ಇಒ ಮತ್ತು ಎ.ಡಿಎಲ್​.ಆರ್​ಗೆ ಸಂತೆ ಮೈದಾನವನ್ನು ಸರ್ವೇ ಕಾರ್ಯ ಮಾಡಿ ತೆರವುಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ಬಿಡಿಸಿಕೊಡುವಂತೆ ಸೂಚಿಸಿದರು. ಅಧಿಕಾರಿಗಳು 15 ದಿನಗಳಲ್ಲಿ ಸಮಸ್ಯೆ ಬಗ್ಗೆ ಸ್ಥಳ ಪರಿಶೀಲಿಸಿ ವರದಿ ನೀಡಲು ಕಾಲಾವಕಾಶ ಕೇಳಿಕೊಂಡರು.

ಕನ್ನಮೇಡಿ ಗ್ರಾಮದ ಶಾಲೆಯ ಶೌಚಗೃಹ ಪಾಯ ಹಾಕದಲೇ ಕಳಪೆ ಕಾಮಗಾರಿ ಮಾಡುತ್ತಿರುವ ಬಗ್ಗೆ ತಾಪಂ ಇಒಗೆ ದೂರು ನೀಡಲಾಗಿತು. ಎರಡು ತಿಂಗಳಾದರೂ ಯಾವುದೇ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಜ.7ರಂದು ಜಿಪಂ ಸಿಇಒಗೆ ದೂರು ಸಲ್ಲಿಸಿ ಸಮಸ್ಯೆ ಮನವರಿಕೆ ಮಾಡಲಾಗಿದೆ. ಆದರೆ ಕ್ರಮಕೈಗೊಳ್ಳದಿರುವ ಕಾರಣ ಲೋಕಾಯುಕ್ತ ಅಧಿಕಾರಿಗಳಿಗೆ ಕನ್ನಮೇಡಿ ಪಿಡಿಒ ವಿರುದ್ಧ ದೂರು ನೀಡಲಾಗಿದೆ ಎಂದು ಸ್ಥಳಿಯ ನಾಗಭೂಷಣ್​ ತಿಳಿಸಿದರು. ಲೋಕಾಯುಕ್ತ ಅಧಿಕಾರಿಗಳು ಸ್ಪಂದಿಸಿ ಸಂಬಂಧಪಟ್ಟ ತಾಪಂ ಇಒಗೆ 15 ದಿನದೊಳಗೆ ಸ್ಥಳ ಪರಿಶೀಲನೆ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಿದರು. ಸಿಪಿಐ ಸುರೇಶ್​, ಗಿರೀಶ್​, ಬಿಇಒ ಇಂದ್ರಾಣಮ್ಮ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವಿಕುಮಾರ್​, ಅರ್​.ಐ ನಾರಯಣ್​ ಗೌಡ, ಪಿಡಬ್ಲ್ಯುಡಿ ಎಇಇ ಅನಿಲ್​ ಕುಮಾರ್​, ಸಿಡಿಪಿಒ ಸುನಿತಾ, ಕೃಷಿ ಅಧಿಕಾರಿ

ಅಜಯ್​ ಕುಮಾರ್​ ಇದ್ದರು.

22 ದೂರು ಅರ್ಜಿ: ಸಭೆಯಲ್ಲಿ ಲೋಕಾಯುಕ್ತ ಅಧಿಕಾರಿಗಳಿಗೆ ಒಟ್ಟು 22 ದೂರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ತಹಸೀಲ್ದಾರ್​ ಕಚೇರಿ 5, ಪೊಲೀಸ್​ 3, ತಾಪಂ ಇಒ 9, ಎ.ಡಿಎಲ್​.ಅರ್​.1, ಪುರಸಭೆಗೆ 2, ಅಬಕಾರಿ 1, ತುಮಕೂರು ವಾಲ್ಮೀಕಿ ಸಂಘ 1 ದೂರು ಸಲ್ಲಿಸಲಾಗಿದೆ.