ಜಿಲ್ಲೆ

ಜನರಿಗೆ ಗುಣಮಟ್ಟದ ಸೇವೆ ಒದಗಿಸಿ

ಚನ್ನರಾಯಪಟ್ಟಣ: ಸರ್ಕಾರದ ಎಲ್ಲ ಯೋಜನೆಗಳನ್ನು ಕಂದಾಯ ಇಲಾಖೆ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ. ನೌಕರರು ಜನರಿಗೆ ಗುಣಮಟ್ಟದ ಸೇವೆ ಒದಗಿಸಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.

ಪಟ್ಟಣದ ಮಿನಿ ಆಡಳಿತಸೌಧದ ಸಭಾಂಗಣದಲ್ಲಿ ಇತ್ತೀಚೆಗೆ ಕಂದಾಯ ಇಲಾಖೆಯ ನೌಕರರ ಸಂಘದ ವತಿಯಿಂದ ಏರ್ಪಡಿಸಿದ್ದ ಕಂದಾಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲ ದಲ್ಲಾಳಿಗಳನ್ನು ದೂರ ಇಡಬೇಕು. ನಿಗದಿತ ಸಮಯದಲ್ಲಿ ಜನರ ಕೆಲಸ ಮಾಡಿಕೊಡುವ ಕಾರ್ಯತತ್ಪರತೆ ನಿಮ್ಮದಾಗಬೇಕು. ಒಂದು ಹೋಬಳಿಯಲ್ಲಿ ಪೌತಿಖಾತೆ ಆಂದೋಲನ ನಡೆದಿದೆ. ಉಳಿದ ಹೋಬಳಿಗಳಲ್ಲಿಯೂ ಪೌತಿ ಖಾತೆಯ ಆಂದೋಲನ ಆಯೋಜಿಸಬೇಕು, ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ಜನರ ಮನೆಬಾಗಿಲಿಗೆ ತೆರಳಿ ಕೆಲಸ ಮಾಡಿಕೊಡಬೇಕು, ನೌಕರರನ್ನು ಹುಡುಕಿಕೊಂಡು ಜನತೆ ಪಟ್ಟಣಕ್ಕೆ ಬರುವಂತಾಗಬಾರದು. ಸರ್ಕಾರಿ ಜಾಗ ಉಳಿಸಬೇಕು. ಇದನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸಲು ಅನುಕೂಲವಾಗುತ್ತದೆ ಎಂದರು.

ತಾಲೂಕು ಕಚೇರಿಯಲ್ಲಿ 70 ಲಕ್ಷ ದಾಖಲೆಗಳಿವೆ. ಅವುಗಳ ಪೈಕಿ ಈಗಾಗಲೇ 53 ಲಕ್ಷ ದಾಖಲೆಗಳನ್ನು ಗಣಕೀಕರಣ ಮಾಡಲಾಗಿದೆ. ಉಳಿದ 17 ಲಕ್ಷ ದಾಖಲೆಗಳನ್ನು ಗಣಕೀಕರಣ ಮಾಡುವ ಕಾರ್ಯ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಜನರಿಗೆ ಸುಲಭವಾಗಿ ಜಮೀನು ದಾಖಲೆಗಳು ಲಭಿಸಲಿವೆ ಎಂದು ತಿಳಿಸಿದರು.

ತಹಸೀಲ್ದಾರ್ ಶಂಕರಪ್ಪ ಮಾತನಾಡಿ, ಸಕಾಲದಲ್ಲಿ ಜನರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಬೇಕು. ಕಂದಾಯ ಇಲಾಖೆಯ ನೌಕರರು, ಅಧಿಕಾರಿಗಳು ಒಂದು ತಂಡದಂತೆ ಕೆಲಸ ಮಾಡುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಬೇಕಿದೆ ಎಂದು ಹೇಳಿದರು.

ಅರಸೀಕೆರೆ ತಹಸೀಲ್ದಾರ್ ಸಂತೋಷ್‌ಕುಮಾರ್, ಬಾಗೂರು ಹೋಬಳಿಯ ಉಪ ತಹಸೀಲ್ದಾರ್ ಮೋಹನ್‌ಕುಮಾರ್ ಮಾತನಾಡಿದರು. ಹಿರೀಸಾವೆ ಉಪ ತಹಸೀಲ್ದಾರ್ ತೇಜಸ್ವಿನಿ, ಶಿರಸ್ತೇದಾರ್ ಎನ್.ಅನಿಲ್ ಕುಮಾರ್. ಬಿ.ಎಸ್.ಪವನ್, ದಂಡಿಗನಹಳ್ಳಿ ಹೋಬಳಿ ಉಪ ತಹಸೀಲ್ದಾರ್ ಪ್ರಭಾಕರ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಆರ್.ಮಂಜುನಾಥ್ ಹಾಜರಿದ್ದರು.