ಜಿಲ್ಲೆ

ಜನರಿಗೆ ಕಾಂಗ್ರೆಸ್​ ಟೋಪಿ ಹಾಕುತ್ತಿದೆ : ಮಾಜಿ ಸಿಎಂ ಎಚ್​ಡಿಕೆ ಆರೋಪ, ಭೀಮಗಾನಹಳ್ಳಿಯಲ್ಲಿ ಜನತಾ ಜಲಧಾರೆ ಯಾತ್ರೆ

Kolar

ಬೂದಿಕೋಟೆ: ಎತ್ತಿನಹೊಳೆ ಜಾರಿ ಮಾಡಿ ವರ್ಷಗಳೇ ಕಳೆದರೂ ಹನಿ ನೀರು ಸಿಕ್ಕಿಲ್ಲ, 4 ಟಿಎಂಸಿ ನೀರಿನಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಹೇಗೆ ಹಂಚಿಕೆ ಮಾಡುತ್ತಾರೆ. 2 ಜಿಲ್ಲೆಗಳ ಜನರಿಗೆ ಕಾಂಗ್ರೆಸ್​ ಟೋಪಿ ಹಾಕಲು ಹೊರಟಿದೆ ಎಂದು ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿ ಆರೋಪ ಮಾಡಿದರು.

ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಹೋಬಳಿಯ ಭೀಮಗಾನಹಳ್ಳಿಯಲ್ಲಿ ಭಾನುವಾರ ಜೆಡಿಎಸ್​ ಹಮ್ಮಿಕೊಂಡಿದ್ದ "ಜನತಾ ಜಲಧಾರೆ' ಕಾರ್ಯಕ್ರಮದಲ್ಲಿ ಮಾತನಾಡಿ, ಜನತಾ ಜಲಧಾರೆಯಿಂದ ನೀರು ಬರುತ್ತಾ ಎಂದು ವಿರೋಧ ಪಕ್ಷದವರು ಮಾತನಾಡಿದ್ದಾರೆ. ನಮ್ಮ ಉದ್ದೇಶ ಅದಲ್ಲ, ನಾವು ಅಧಿಕಾರಕ್ಕೆ ಬಂದ್ರೆ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುತ್ತೇವೆ ಎಂದರು.

ಕೆ.ಸಿ.ವ್ಯಾಲಿಯ ಕೊಳಚೆ ನೀರು ಕೊಟ್ಟು ಪ್ರಚಾರ ಗಿಟ್ಟಿಸಿಕೊಳ್ಳುವ ಉದ್ದೇಶವಿಲ್ಲ. ಕೋಲಾರದ ಅಮಾಯಕ ಜನರಿಗೆ ಸ್ಲೋ ಪಾಯ್ಸನ್​ ನೀಡಲಾಗುತ್ತಿದೆ. ಅದಕ್ಕಾಗಿ ಜನತಾ ಜಲಧಾರೆ ಯೋಜನೆ ಮೂಲಕ ನೀರಾವರಿ ಯೋಜನೆಗಳ ಹಣ ಹಂಚಿಕೆ ಮಾಡುವುದು ನಮ್ಮ ಉದ್ದೇಶವಾಗಿದೆ. ಜೆಡಿಎಸ್​ ಅಧಿಕಾರಕ್ಕೆ ಬಂದ್ರೆ 5 ಲಕ್ಷ ಕೋಟಿ ರೂ. ನೀರಾವರಿ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದರು.

ಯರಗೋಳ್​ ಡ್ಯಾಂ ನಿರ್ಮಾಣಕ್ಕೆ 2006ರಲ್ಲಿ ನಾನು 50 ಕೋಟಿ ರೂ. ಅನುದಾನ ನೀಡಿದ್ದೇನೆ. ಮಾಹಿತಿ ಕೊರತೆಯಿಂದ ಯೋಜನೆ ಅಪೂರ್ಣಗೊಂಡಿದೆ. ಈಗ ಜನರಿಗೆ ನೀರು ನೀಡಲು ಎಷ್ಟು ವರ್ಷ ಬೇಕು?. ಶ್ರೀ ಸಿಎಂ ಬೊಮ್ಮಾಯಿ ಜತೆ ಚರ್ಚಿಸಿ 4 ತಿಂಗಳಲ್ಲಿ ಡ್ಯಾಂ ಕಾಮಗಾರಿ ಪೂರ್ಣಗೊಳಿಸುತ್ತೇನೆ ಎಂದರು.

ಭವಿಷ್ಯಕ್ಕಾಗಿ ಜೆಡಿಎಸ್​ ಅಧಿಕಾರಕ್ಕೆ ತನ್ನಿ: ಸಮಾಜದಲ್ಲಿ ಬಿಜೆಪಿ ಅಶಾಂತಿ ಸೃಷ್ಟಿಸುತ್ತಿದ್ದು, ಅದಕ್ಕೆ ಪೆಟ್ರೋಲ್​ ಸುರಿಯಲು ಕಾಂಗ್ರೆಸ್​ ಹೊರಟಿದೆ. ಇದಕ್ಕೆ ಯುವಕರು ಬಲಿಯಾಗಬೇಡಿ. ನಿಮಗೆ ಬದುಕು ಬೇಕೋ ಧರ್ಮ ಬೇಕೋ ಆಯ್ಕೆ ಮಾಡಿಕೊಳ್ಳಿ. ಉತ್ತಮ ಆಡಳಿತ ಮತ್ತು ಯೋಜನೆಗಳ ಅನುಷ್ಠಾನಕ್ಕಾಗಿ ಜೆಡಿಎಸ್​ ಅಧಿಕಾರಕ್ಕೆ ತನ್ನಿ ಎಂದರು.

ಕಠಿಣ ಕ್ರಮ ಕೈಗೊಳ್ಳಬೇಕು: ಪಿಎಸ್​ಐ ಅಕ್ರಮದಲ್ಲಿ ಸರ್ಕಾರ ನಾಟಕ ಆಡುತ್ತಿದ್ದು, 4ದಿನ ತನಿಖೆ ನಡೆಸಿ ಪ್ರಕರಣ ಮುಚ್ಚಬಾರದು, 15 ದಿವಸ ಇದಕ್ಕೆ ಪ್ರಚಾರ ಕೊಟ್ಟು ಬಳಿಕ ಪ್ರಕರಣವನ್ನು ಕೋಲ್ಡ್​ ಸ್ಟೋರೇಜ್​ಗೆ ತಳ್ಳುತ್ತಾರೆ. ವ್ಯವಸ್ಥೆ ಹಾಳು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಹಣ ತಿಂದವರನ್ನು ಆರಾಮವಾಗಿ ಬೆಳೆಯೋಕೆ ಬಿಟ್ಟಿದ್ದಾರೆ. ಅಮಾಯಕರನ್ನು ಬಂಧಿಸಿ ಕ್ರಮ ಕೈಗೊಳ್ಳೋದು ಬೇಡ ಎಂದು ಸಲಹೆ ನೀಡಿದರು.

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ: ಕಾಂಗ್ರೆಸ್​ ಜೆಡಿಎಸ್​ ಮುಗಿಸಲು ಹೊರಟಾಗ ನಾನು ಬಿಜೆಪಿ ಜತೆ ಸೇರಿ ಸರ್ಕಾರ ಮಾಡಿದ್ದೆ. ಕೋಮುವಾದಕ್ಕೆ ಬೆಂಬಲ ಕೊಟ್ಟಿಲ್ಲ, ನನ್ನ ಕಾಲದಲ್ಲಿ ಯಾವುದೇ ಗಲಭೆಗೆ ಆಗಿಲ್ಲ, ಕೊಲೆಗಳಿಗೆ ಅವಕಾಶ ಕೊಟ್ಟಿಲ್ಲ. ಸಿದ್ದರಾಮಯ್ಯ 5 ವರ್ಷಗಳ ಆಡಳಿತದಲ್ಲಿ ಎಷ್ಟು ಮರ್ಡರ್​ಗಳಾಯ್ತು. ಎಷ್ಟು ಕೊಲೆಗಳಾಯ್ತು ಎಂದು ಸಿದ್ದರಾಮಯ್ಯ ವಿರುದ್ಧ ಗುಡುಗಿದರು. ವಾಜಪೇಯಿ ಸರ್ಕಾರದಲ್ಲಿ ಮಮತಾ ಬ್ಯಾನರ್ಜಿ ಮಂತ್ರಿ ಆಗಿರಲಿಲ್ವಾ, ಬಿಜೆಪಿ ಜತೆ ಸರ್ಕಾರ ಮಾಡಿಲ್ವಾ ಎಂದು ಪ್ರಶ್ನೆ ಮಾಡಿದ ಕುಮಾರಣ್ಣ. ಆಗಂತ ಜಾತ್ಯತಿತ ತತ್ವ ಯಾರಿಗೂ ಮಾರಾಟ ಮಾಡಲ್ಲ, ಜೆಡಿಎಸ್​ ಮುಗಿಸಲು ಸಿದ್ದರಾಮಯ್ಯ ಹೊರಟಿದ್ದಾರೆ, ಅದು ಸಾಧ್ಯವಿಲ್ಲ ಎಂದು ಹೇಳಿದರು.

ಬಿಜೆಪಿಗೆ ಹೋಗಲ್ಲ: ಯಾವುದೇ ಕಾರಣಕ್ಕೂ ಜೆಡಿಎಸ್​ ತೊರೆದು ಬಿಜೆಪಿಗೆ ಹೋಗುವುದಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ 50 ಸಾವಿರ ಮತ ಪಡೆದಿದ್ದೇನೆ. ಮುಂಬರುವ ಚುನಾವಣೆಗೆ ಕುಮಾರಸ್ವಾಮಿ ಟಿಕೆಟ್​ ನೀಡಿದರೆ ಖಂಡಿತ ಶಾಸಕನಾಗುತ್ತೇನೆ ಎಂದು ಜೆಡಿಎಸ್​ ಮುಖಂಡ ಮಲ್ಲೇಶ್​ ಬಾಬು ಹೇಳಿದರು.

ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಬಿರಿಯಾನಿ ಮಾಡಿಸಲಾಗಿತ್ತು. ಎಂಎಲ್ಸಿ ಇಂಚರ ಗೋವಿಂದರಾಜು, ಜಿಪಂ ಮಾಜಿ ಅಧ್ಯೆ ಮಂಗಮ್ಮ ಮುನಿಸ್ವಾಮಿ, ಮುಖಂಡರಾದ ತೂಪಲ್ಲಿ ಚೌಡರೆಡ್ಡಿ, ಸಿಎಂಆರ್​ ಶ್ರೀನಾಥ್​, ವಕ್ಕಲೇರಿ ರಾಮು, ಜಿ.ರಾಮೇಗೌಡ, ನಿವೃತ್ತ ಡಿವೈಎಸ್​ಪಿ ಶಿವಕುಮಾರ, ಕಿತ್ತಂಡೂರು ನಂಜುಂಡಪ್ಪ, ತಾಲೂಕು ಅಧ್ಯಕ್ಷ ದೇವರಾಜು ಮತ್ತಿತರರಿದ್ದರು.