ಚಿತ್ರದುರ್ಗ: ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ ಹೇಳಿದರು.
ಆರೋಗ್ಯ ಇಲಾಖೆ, ಬೆಂಗಳೂರು ಕಾವೇರಿ ಆಸ್ಪತ್ರೆಯಿಂದ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ತುರ್ತು ಚಿಕಿತ್ಸೆ, ಸ್ಟ್ರೋಕ್, ಸಿಪಿಆರ್ ಕುರಿತು ಜಿಪಂದಲ್ಲಿ ಶುಕ್ರವಾರ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಬರಪೀಡಿತ ಚಿತ್ರದುರ್ಗ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳಿದ್ದಾರೆ. ವಿನಾಕಾರಣ ಜನರನ್ನು ಅಲೆದಾಡಿಸದೆ ಗೌರವ ಮತ್ತು ಪ್ರಾಮಾಣಿಕವಾಗಿ ಅವರಿಗೆ ಆರೋಗ್ಯ ಸೇವೆ ಒದಗಿಸುವುದು ಆರೋಗ್ಯ ಅಧಿಕಾರಿಗಳ ಜವಾಬ್ದಾರಿ ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಹಾವು, ನಾಯಿ ಮತ್ತು ಇತರೆ ಪ್ರಾಣಿಗಳ ಕಡಿತ, ಅಲರ್ಜಿಯಿಂದಾದ ಕಾಯಿಲೆಗಳು, ಅಪಘಾತಗಳು, ಪಾರ್ಶ್ವವಾಯು, ಮೆದುಳಿನ ಜೀವಕೋಶಗಳಿಗೆ ಹಾನಿಯುಂಟಾದಾಗ ಉದ್ಭವಿಸುವ ದೈಹಿಕ ತೊಂದರೆ ಸಹಿತ ನಾನಾ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದರು.
ತುರ್ತು ಚಿಕಿತ್ಸೆಗಳ ತರಬೇತಿ ಪಡೆದ ಬಳಿಕ ಜನರಿಗೆ ಉತ್ತಮ ಆರೋಗ್ಯ ನೀಡುವುದು ನಿಮ್ಮಗಳ ಕರ್ತವ್ಯ ಎಂದು ಆರೋಗ್ಯಾಧಿಕಾರಿಗಳಿಗೆ ಎಂದು ಕಿವಿಮಾತು ಹೇಳಿದರು.
ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿಮಠ, ಕಾವೇರಿ ಆಸ್ಪತ್ರೆ ಮುಖ್ಯಸ್ಥ ಡಾ. ಸುರೇಂದ್ರ ಸಂಪತ್, ಡಾ.ಎಚ್. ಸಂತೋಷ್ ಮತ್ತಿತರರು ಇದ್ದರು.