ಜಿಲ್ಲೆ

ಜನರಿಗೆ ಆರ್ಥಿಕ ಪ್ಯಾಕೇಜ್ ತಲುಪಲಿ

ಹಾವೇರಿ: ರಾಜ್ಯ ಸರ್ಕಾರದ ಹೊಸ ಬಜೆಟ್ ಘೊಷಿತ ಕಾರ್ಯಕ್ರಮಗಳ ಆರಂಭ ಹಾಗೂ ಘೊಷಿಸಿರುವ ಆರ್ಥಿಕ ಪ್ಯಾಕೇಜ್ ಅಡಿ ಪರಿಹಾರ ಒದಗಿಸಲು ಫಲಾನುಭವಿಗಳನ್ನು ಗುರುತಿಸುವ ಕೆಲಸ ಆರಂಭಿಸುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ವಿಡಿಯೋ ಸಂವಾದದ ಮೂಲಕ ತಾಲೂಕಿನ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಲಾಕ್​ಡೌನ್​ನಿಂದ ತೊಂದರೆಗೊಳಗಾದ ವಿವಿಧ ವೃತ್ತಿಪರ ಸಮುದಾಯಗಳಿಗೆ ಸರ್ಕಾರ ಹಲವು ಪ್ರೋತ್ಸಾಹದಾಯಕ ನೆರವನ್ನು ಘೊಷಿಸಿದೆ. ಇವರಿಂದ ಅರ್ಜಿ ಸ್ವೀಕರಿಸಿ ಪರಿಹಾರ ತಲುಪಿಸುವ ನಿಟ್ಟಿನಲ್ಲಿ ತಹಸೀಲ್ದಾರ್​ಗಳು ಹಾಗೂ ಯೋಜನೆಗಳ ವ್ಯಾಪ್ತಿಗೆ ಬರುವ ಅಧಿಕಾರಿಗಳು ಕ್ರಮವಹಿಸುವಂತೆ ತಿಳಿಸಿದರು.

ಹೂ ಬೆಳೆಗಾರರು, ತರಕಾರಿ ಹಾಗೂ ಹಣ್ಣು ಬೆಳೆಗಾರರಿಗೆ ಲಾಕ್​ಡೌನ್ ಸಂದರ್ಭದಲ್ಲಿ ನಷ್ಟ ಅನುಭವಿಸಿದ ಕಾರಣ ಪರಿಹಾರ ಘೊಷಿಸಲಾಗಿದೆ. ಈಗಾಗಲೇ ಸಮಿತಿ ರಚಿಸಿ ನಷ್ಟದ ವಿವರ ಸಂಗ್ರಹಿಸಲು ಸೂಚನೆ ನೀಡಲಾಗಿದೆ. ಈ ಕುರಿತಂತೆ ತೋಟಗಾರಿಕೆ, ಕೃಷಿ , ಕಂದಾಯ ಅಧಿಕಾರಿಗಳು ಕ್ರಮವಹಿಸಬೇಕು. ಅಗಸ ವೃತ್ತಿಯಲ್ಲಿರುವ ಜನರಿಗೆ ಹಾಗೂ ಕ್ಷೌರಿಕ ವೃತ್ತಿ, ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ತಲಾ 5 ಸಾವಿರ ರೂ. ಪರಿಹಾರ ಘೊಷಣೆ ಮಾಡಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಈ ಕುರಿತಂತೆ ಮಾಹಿತಿ ಸಂಗ್ರಹಿಸಿ ಅರ್ಹರಿಗೆ ಅಗತ್ಯ ಪರಿಹಾರ ನೀಡುವ ನಿಟ್ಟಿನಲ್ಲಿ ತಹಸೀಲ್ದಾರ್​ಗಳೊಂದಿಗೆ ಸಮನ್ವಯ ಸಾಧಿಸುವಂತೆ ಸೂಚಿಸಿದರು.

ಕೈಗಾರಿಕೆ, ಸಣ್ಣ ಕೈಗಾರಿಕೆಗಳಿಗೆ ನೆರವು, ನೇಕಾರರಿಗೆ, ರೈತರಿಗೆ ಬಡ್ಡಿರಹಿತ ಸಾಲ ಸೇರಿ ಹಲವು ಪರಿಹಾರ ಯೋಜನೆಗಳನ್ನು ಸರ್ಕಾರ ಪ್ರಕಟಿಸಿದೆ. ಇದೇ ಮಾದರಿಯಲ್ಲಿ ಕೇಂದ್ರ ಸರ್ಕಾರವು ಹಲವು ಪ್ರೋತ್ಸಾಹದಾಯಕ ನೆರವು ಪ್ರಕಟಿಸಿದೆ. ಈ ಕುರಿತು ಸಂಬಂಧಿಸಿದ ಇಲಾಖೆಗಳು ಫಲಾನುಭವಿಗಳನ್ನು ನೋಂದಾಯಿಸಿ ನೆರವು ಒದಗಿಸಬೇಕು ಎಂದರು.

ರಾಜ್ಯ ಸರ್ಕಾರವು ಬಜೆಟ್​ನಲ್ಲಿ ಘೊಷಿಸಿರುವ ಯೋಜನೆಗಳ ಅನುಷ್ಠಾನಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ನೀರಾವರಿ, ಕೃಷಿ, ತೋಟಗಾರಿಕೆ, ಲೋಕೋಪಯೋಗಿ, ಪಂಚಾಯತ್​ರಾಜ್ ಸೇರಿ ವಿವಿಧ ಇಲಾಖೆಯ ಹೊಸ ಯೋಜನೆಗಳ ವಿಸõತ ಕ್ರಿಯಾ ಯೋಜನೆಗಳನ್ನು ತ್ವರಿತವಾಗಿ ತಯಾರಿಸಿಕೊಂಡು ಅನುಷ್ಠಾನಕ್ಕೆ ಸಿದ್ಧವಾಗಬೇಕು. ಇದನ್ನು ಗಂಭೀರವಾಗಿ ಪರಿಗಣಿಸಿ ಈಗಿನಿಂದಲೇ ಕಾರ್ಯೋನ್ಮುಖರಾಗಬೇಕು ಎಂದರು.

ಸಭೆಯಲ್ಲಿ ಎಸಿ ಡಾ. ದಿಲೀಪ್ ಶಶಿ, ತಹಸೀಲ್ದಾರ್ ಶಂಕರ ಜಿ.ಎಸ್., ವಾರ್ತಾಧಿಕಾರಿ ಡಾ. ಬಿ.ಆರ್. ರಂಗನಾಥ್, ನಗರಾಭಿವೃದ್ಧಿ ಕೋಶದ ಅಧಿಕಾರಿ ರವೀಂದ್ರ ಕುಂದಗೋಳ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಭಾವನಮೂರ್ತಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಸ್.ಎ. ಜಮಖಾನೆ, ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಗುಡ್ಡಪ್ಪ, ನಿರ್ವಿುತಿ ಕೇಂದ್ರದ ಯೋಜನಾ ನಿರ್ದೇಶಕ ತಿಮ್ಮೇಶಕುಮಾರ, ಡಿಡಿಪಿಐ ಅಂದಾನೆಪ್ಪ ವಡಗೇರಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಲ್. ಪ್ರದೀಪ, ಕೃಷಿ ಇಲಾಖೆ ಉಪನಿರ್ದೇಶಕ ಕರಿಯಲ್ಲಪ್ಪ ಇತರರಿದ್ದರು.

ಆನ್​ಲೈನ್ ಅರ್ಜಿ ಸರಳೀಕರಿಸಿ

ಎಡಿಸಿ ಎಂ. ಯೋಗೇಶ್ವರ ಮಾತನಾಡಿ, ಆಟೋ ಚಾಲಕರು, ಅಗಸರು, ಕ್ಷೌರಿಕರಿಗೆ ಘೊಷಿಸಿರುವ ಪರಿಹಾರ ಮೊತ್ತ ಪಡೆಯಲು ಆನ್​ಲೈನ್ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಎನ್​ಐಸಿ ಮೂಲಕ ಸಾಫ್ಟವೇರ್ ಅಭಿವೃದ್ಧಿ ಪಡಿಸಬೇಕು. ಎಲ್ಲ ತಹಸೀಲ್ದಾರ್​ಗಳಿಗೆ ಹಾಗೂ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಮಾಹಿತಿ ಒದಗಿಸಬೇಕು. ಯೋಜನೆಯ ಲಾಭ ಪಡೆಯಲು ಇರುವ ಅರ್ಹತೆ, ಸಲ್ಲಿಸಬೇಕಾದ ದಾಖಲೆ ಹಾಗೂ ವಿವರಗಳ ಕುರಿತು ತಿಳಿಸಲಾಗುವುದು. ತ್ವರಿತವಾಗಿ ಈ ಕುರಿತು ಫಲಾನುಭವಿಗಳ ನೋಂದಣಿ ಹಾಗೂ ಯಾವುದೇ ಗೊಂದಲವಿಲ್ಲದೆ ಪರಿಹಾರ ಪಾವತಿಗೆ ಸಿದ್ಧತೆ ಮಾಡಿಕೊಳ್ಳಿ ಎಂದರು.