ಹುಕ್ಕೇರಿ: ಕೋವಿಡ್ 2ನೇ ಅಲೆ ನಿಯಂತ್ರಣಕ್ಕಾಗಿ ಸರ್ಕಾರ ಹಲವು ಕಠಿಣ ನಿರ್ಣಯ ತೆಗೆದುಕೊಂಡರೂ ಜನರ ಸಹಕಾರ ಶೂನ್ಯ. ರೋಗದ ಭಯ ಅವರಿಗಿಲ್ಲವೋ ಅಥವಾ ಜೀವ ಬೇಸರವಾಗಿದೆಯೋ ಗೊತ್ತಾಗುತ್ತಿಲ್ಲ ಎಂದು ಸಿಪಿಐ ರಮೇಶ ಛಾಯಾಗೋಳ ಕಳವಳ ವ್ಯಕ್ತಪಡಿಸಿದರು. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‌ಡೌನ್ ಘೋಷಣೆ ಮಾಡಿ ಬೆಳಗ್ಗೆ 6 ಗಂಟೆಯಿಂದ 10ರ ವರೆಗೆ ವ್ಯವಹರಿಸಲು ಅವಕಾಶ ಕಲ್ಪಿಸಿದರೂ ಜನರು ಸಲ್ಲದ ನೆಪ ಹೇಳಿಕೊಂಡು ಸಂಚರಿಸುವುದನ್ನು ಬಿಡಲಿಲ್ಲ. ಇದರಿಂದ ರೋಸಿಹೋದ ಸ್ಥಳೀಯ ವರ್ತಕರು ಸ್ವಯಂ ಪ್ರೇರಣೆಯಿಂದ ತಮ್ಮ ಅಂಗಡಿ-ಮುಂಗಟ್ಟುಗಳನ್ನು 10 ದಿನ ಸಂಪೂರ್ಣವಾಗಿ ಮುಚ್ಚಲು ನಿರ್ಧರಿಸಿದರು. ಇದರಿಂದಲಾದರೂ ಅನಗತ್ಯ ಸಂಚಾರ ಕಡಿಮೆಯಾಗಬಹುದೆಂದು ನಾವು ನಿರೀಕ್ಷಿಸಿದ್ದೆವು. ಅಷ್ಟಾದರೂ ಜನ ಅನಗತ್ಯ ತಿರುಗಾಟ ನಿಲ್ಲಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅನಗತ್ಯ ಸಂಚರಿಸುವವರ ವಾಹನ ವಶಕ್ಕೆ ಪಡೆದು ದಂಡ ವಿಧಿಸಲಾಗಿದೆ. ಅಷ್ಟಾದರೂ ಅನಗತ್ಯ ಸಂಚಾರ ನಿಲ್ಲಿಸದಿರುವುದು ವಿಷಾದಕರ ಎಂದರು. ಪಿಎಸ್‌ಐ ಸಿದ್ರಾಮಪ್ಪ ಉನ್ನದ ಮಾತನಾಡಿ, 60ಕ್ಕೂ ಹೆಚ್ಚು ದ್ವಿಚಕ್ರ ವಾಹನ ವಶಪಡಿಸಿಕೊಂಡು, ಪ್ರಕರಣ ದಾಖಲಿಸಲಾಗಿದೆ ಎಂದರು.