ನಿಡಗುಂದಿ: ತಾಲೂಕು ಆಡಳಿತಕ್ಕೆ ಚುರುಕು ಮುಟ್ಟಿಸುವ ಉದ್ದೇಶದಿಂದ ನಿಡಗುಂದಿ ತಾಲೂಕು ಕಚೇರಿಗೆ ಶನಿವಾರ ಸಂಜೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕು ಕಚೇರಿಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಸಮಸ್ಯೆಗಳ ಪರಿಹಾರಕ್ಕೆ ಸೂಚಿಸಿದರು. ಸಾರ್ವಜನಿಕರಿಗೆ ಸರ್ಕಾರದ ವಿವಿಧ ಯೋಜನೆಗಳು ಸಮರ್ಪಕವಾಗಿ ತಲುಪಿಸುವಲ್ಲಿ ಅಧಿಕಾರಿಗಳು ಕಾರ್ಯ ಮಾಡಬೇಕು. ಸಾರ್ವಜನಿಕರಿಂದ ದೂರು ಬರದಂತೆ ಕೆಲಸ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಂತರ ತಾಪಂ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡರು. ತಾಪಂ ಆವರಣಲ್ಲಿ ಪುರಾತನ ಶಾಲಾ ಕಟ್ಟಡ ಸಂಪೂರ್ಣ ಹಾಳಾಗಿದ್ದು, ಅದನ್ನು ಜೀರ್ಣೋದ್ಧಾರ ಮಾಡುವಂತೆ ನಾಗರಿಕರು ಜಿಲ್ಲಾಧಿಕಾರಿಗಳ ಬಳಿ ಮನವಿ ಮಾಡಿಕೊಂಡರು. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಸಂಬಂಧಿಸಿದ ಅಧಿಕಾರಿಗಳಿಗೆ ಪುರಾತನ ಕಟ್ಟಡಗಳನ್ನು ಉಳಿಸಿ ಬೆಳೆಸಬೇಕು ಎಂದರು.
ಮಿನಿ ವಿಧಾನಸೌದ ಜಾಗೆ ಪರಿಶೀಲನೆ: ಆಲಮಟ್ಟಿ ರಸ್ತೆಯಲ್ಲಿರುವ ನಿಡಗುಂದಿ ಮಿನಿವಿಧಾನಸೌದ ಕಟ್ಟಡಕ್ಕೆ ಮೀಸಲಾದ ಜಾಗೆಯನ್ನು ಜಿಲ್ಲಾಧಿಕಾರಿ ಪರಿಶೀಲಿಸಿ, ಮಿನಿ ವಿಧಾನಸೌದ ಜಾಗೆ ಅತ್ಯಂತ ಸುಂದರವಾಗಿದ್ದು, ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರದಲ್ಲಿ ಪ್ರಸ್ತಾವಣೆ ಸಲ್ಲಿಕೆಯಾಗಿದ್ದು, ಸದ್ಯದಲ್ಲಿ ಅನುದಾನ ದೊರೆಯುವ ಭರವಸೆ ಹೊಂದಲಾಗಿದೆ ಎಂದರು.
ಡೇ ನಲ್ಮ್ ಯೋಜನೆಯಡಿ ವಿವಿಧ ಯೋಜನೆ ಪ್ರಯೋಜನ ಪಡೆದುಕೊಂಡ ಫಲಾನುಭವಿಗಳಿಗೆ ಸರ್ಕಾರದ ಸಹಾಯಧನ ಲಭ್ಯವಾಗುತ್ತಿಲ್ಲ. ಸಾಲ ಯೋಜನೆ ಪಡೆದುಕೊಂಡ ಫಲಾನುಭವಿಗಳಿಗೆ ವರ್ಷವಾದರೂ ಬಡ್ಡಿ ಸಹಾಯಧನ ನೀಡುತ್ತಿಲ್ಲ ಎಂದು ಯೋಜನೆ ಫಲಾನುಭವಿಗಳು ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದು ಸಮಸ್ಯೆ ಪರಿಹಾರ ಮಾಡಲಾಗುವುದು ಎಂದರು.
ತಹಸೀಲ್ದಾರ್ ಎ.ಬಿ. ಅಮರವಾಡಗಿ, ಗ್ರೇಡ್-2 ತಹಸೀಲ್ದಾರ್ ಎಚ್.ಎನ್. ಬಡಿಗೇರ, ತಾಪಂ ಇಒ ವಿ.ಎಸ್. ಹಿರೇಮಠ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ ಮಾಡಬಾಳ, ಕಂದಾಯ ನಿರೀಕ್ಷಕ ವೆಂಕಟೇಶ ಅಂಬಿಗೇರ, ಕಂದಾಯ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.