ಬೆಳಗಾವಿ ನಗರದ ಎಸ್.ಜಿ.ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅಶೋಕ ಮಳಗಲಿ ರಚಿಸಿದ ‘ನೂರೊಂದು ಚುಟುಕು ಚಟಾಕಿಗಳು’ ಕವನ ಸಂಕಲನ ಬಿಡುಗಡೆ ಮಾಡಲಾಯಿತು. ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ, ಅಲ್ಲಾ ಗಿರಿರಾಜ್ ಕನಕಗಿರಿ, ಜಯಾನಂದ ಮಾದರ, ಬಸವರಾಜ ಜಗಜಂಪಿ, ಮಹೇಶ ನಾಯಕ ಇತರರಿದ್ದರು. 
ಜಿಲ್ಲೆ

ಜನರಲ್ಲಿ ಓದುವ ಆಸಕ್ತಿ ಹೆಚ್ಚಿಸಿ

ಬೆಳಗಾವಿ: ಕವಿಯಾದವರು ಪುಸ್ತಕ ಹೊರ ತರುವುದಕ್ಕಿಂತ ಜನರಲ್ಲಿ ಓದುವ ಆಸಕ್ತಿ ಹೆಚ್ಚಿಸುವುದು ಇಂದಿನ ಅಗತ್ಯವಾಗಿದೆ ಎಂದು ಕನಕಗಿರಿಯ ಗಜಲ್ ಕವಿ ಅಲ್ಲಾ ಗಿರಿರಾಜ್ ಅಭಿಪ್ರಾಯಪಟ್ಟರು.

ನಗರದ ಎಸ್.ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಶೋಕ ಮಳಗಲಿ ಅವರು ರಚಿಸಿದ ‘ನೂರೊಂದು ಚುಟುಕು ಚಟಾಕಿಗಳು’ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿ, ಯುವಕರಲ್ಲಿ ಪುಸ್ತಕ ಓದುವ ಸಂಸ್ಕೃತಿ ಬೆಳೆಸಿದರೆ ಕನ್ನಡ ಸಾಹಿತ್ಯ ಬೆಳೆಯಲು ಸಾಧ್ಯ ಎಂದರು. ಸಾನ್ನಿಧ್ಯ ವಹಿಸಿದ್ದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಅಶೋಕ ಮಳಗಲಿ ಅವರು ಎಲ್ಲ ವಯೋಮಾನದವರು ಓದುವಂತಹ ಮತ್ತು ಎಲ್ಲರಿಗೂ ಅನುಕೂಲವಾಗುವ ಚುಟುಕು ರಚಿಸಿದ್ದಾರೆ. ಪುಸ್ತಕ ಬರೆದು ಹೊರತಂದು, ಅದನ್ನು ಮಾರಾಟ ಮಾಡುವುದು ಈಗ ಹೋರಾಟವಾಗಿದೆ. ಹೀಗಾಗಿ, ನಾವು ಪುಸ್ತಕಗಳನ್ನು ಓದಿ ಸಾಹಿತ್ಯ ಕ್ಷೇತ್ರ ಬೆಳೆಸಬೇಕಿದೆ ಎಂದರು.

ಕರ್ನಾಟಕ ಲಲಿತ ಕಲಾ ಅಕಾಡೆಮಿ ಸದಸ್ಯ ಜಯಾನಂದ ಮಾದರ ಅವರು ಕೃತಿ ಪರಿಚಯಿಸಿದರು. ಸಾಹಿತಿ ಬಸವರಾಜ ಜಗಜಂಪಿ ಮಾತನಾಡಿದರು. ಕೃತಿ ಹೊರತಂದ ಕಲ್ಲಚ್ಚು ಪ್ರಕಾಶನದ ಮಂಗಳೂರಿನ ಮಹೇಶ ನಾಯಕ ಅವರನ್ನು ಸತ್ಕರಿಸಲಾಯಿತು.

ಹಿರಿಯರಾದ ಎಲ್.ಎಸ್. ಶಾಸ್ತ್ರಿ, ಜಿನದತ್ತ ದೇಸಾಯಿ, ವಿರೂಪಾಕ್ಷ ತಿಗಡಿಕರ, ಶಿಕ್ಷಣ ಅಧಿಕಾರಿಗಳಾದ ರವಿ ಭಜಂತ್ರಿ, ಸಾಹಿತಿಗಳಾದ ಸಿ.ಕೆ. ಜೋರಾಪುರ, ಜಯಶ್ರೀ ನಿರಾಕಾರಿ, ಬಿ.ವಿ. ಹಿರೇಮಠ, ಪಿ.ಜಿ. ಕೆಂಪಣ್ಣವರ, ರವೀಂದ್ರ ತೋಟಗೇರ, ಎಂ.ಬಿ. ಹೊಸಳ್ಳಿ, ಶ್ರೀರಂಗ ಜೋಶಿ, ಶಿರೀಷ ಜೋಶಿ, ಸುನಂದಾ ಎಮ್ಮಿ, ಬಸವರಾಜ್ ಗಾರ್ಗಿ, ಎಂ.ವೈ.ಮೆಣಸಿನಕಾಯಿ, ಶಿವಾನಂದ ತಲ್ಲೂರ, ವೀರಭದ್ರ ಅಂಗಡಿ, ಸಾಬಣ್ಣ ಕಳಸಕೊಪ್ಪ ಇತರರಿದ್ದರು.

ಚುಟುಕು ಸಾಹಿತ್ಯ ಪರಿಷತ್ ಕಾರ್ಯಾಧ್ಯಕ್ಷ ದೀಪಿಕಾ ಚಾಟೆ ಸ್ವಾಗತಿಸಿದರು. ಅನ್ನಪೂರ್ಣಾ ಮಳಗಲಿ ಸಂಗಡಿಗರು ಪ್ರಾರ್ಥಿಸಿದರು. ಡಾ. ರಾಜೇಶ್ವರಿ ಹಿರೇಮಠ ನಿರೂಪಿಸಿದರು. ಜ್ಯೋತಿ ಬದಾಮಿ ವಂದಿಸಿದರು.