ಕೋಲಾರ: ಅಟಲ್ ಭೂಜಲ ಯೋಜನೆಯಡಿ ಬಿಡುಗಡೆಯಾಗಿರುವ 205 ಕೋಟಿ ರೂ.ಗಳನ್ನು ಜಲಮೂಲಗಳ ಪುನಶ್ಚೇತನಕ್ಕೆ ಬಳಸಬೇಕು, ಕೈಗಾರಿಕೆಗಳು ಸಿಎಸ್‌ಆರ್ ನಿಧಿಯನ್ನು ಕೆರೆ ಪುನಶ್ಚೇತನಕ್ಕೆ ಬಳಸಬೇಕು, ಈ ಸಂಬಂಧ ಕೈಗಾರಿಕೆಗಳ ಸಭೆ ಕರೆಯಬೇಕು ಎಂದು ಸಂಸದ ಎಸ್.ಮುನಿಸ್ವಾಮಿ ಜಿಲ್ಲಾಧಿಕಾರಿಗೆ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಮಾತನಾಡಿ, ಕ್ಷೇತ್ರ ವ್ಯಾಪ್ತಿಯ 8 ತಾಲೂಕುಗಳಿಗೆ ಬಿಡುಗಡೆಯಾದ ಅನುದಾನ ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಪಾಲಾರ್, ಪೆನ್ನಾರ್ ನದಿ ಕಣಿವೆ ಪ್ರದೇಶ, ಕೆರೆ, ಕಾಲುವೆಗಳ ಪುನಶ್ಚೇತನ, ಅಂತರ್ಜಲ ಹೆಚ್ಚಳಕ್ಕೆ ಚೆಕ್‌ಡ್ಯಾಂ ನಿರ್ಮಾಣ ಮಾಡಿ, ಮಳೆಗಾಲದಲ್ಲಿ ಜಿಲ್ಲೆಯ ಗಡಿಯಿಂದ ನೆರೆಯ ರಾಜ್ಯಕ್ಕೆ ನೀರು ಹರಿಯುವ ಕಡೆ ಚೆಕ್‌ಡ್ಯಾಂ ನಿರ್ಮಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಅನೇಕ ಕೈಗಾರಿಕೆಗಳಿವೆ. ಕರೊನಾ ಸಂದರ್ಭದಲ್ಲಿ ಸಿಎಸ್‌ಆರ್ ನಿಧಿಯಡಿ ಏನು ಕೆಲಸ ಮಾಡಿದ್ದಾರೆ? ಶಾಲೆಗಳಿಗೆ ನೋಟ್‌ಪುಸ್ತಕ, ಸಣ್ಣಪುಟ್ಟ ಸೌಲಭ್ಯ ಕಲ್ಪಿಸುವುದಲ್ಲ, ಅನುದಾನವನ್ನು ಜಿಲ್ಲೆಯ ಕೆರೆಗಳ ಅಭಿವೃದ್ಧಿಗೆ ಬಳಸಬೇಕು. ಕಳೆದ ಬಾರಿ ಡಿಸಿ ಕಚೇರಿಯಲ್ಲಿ ಕರೆದ ಸಭೆಗೆ ಕೈಗಾರಿಕೆಗಳ ಪ್ರತಿನಿಧಿಗಳು ಯಾಕೆ ಬರಲಿಲ್ಲ ಎಂದು ಡಿಐಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೆ ಮುಂದಿನ ವಾರ ಎಲ್ಲ ಕೈಗಾರಿಕೆಗಳ ಜತೆ ಸಭೆ ನಿಗದಿಪಡಿಸಿ, ಒಬ್ಬೊಬ್ಬರಿಗೆ ಒಂದೊಂದು ಕೆರೆ ವಹಿಸೋಣ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಕೈಗಾರಿಕೆ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆಗೆ ಭೂಮಿ ಹಂಚಿಕೆ ಮಾಡಿದ್ದರಲ್ಲಿ ಯಾರು ಎಲ್ಲಿ ಕೈಗಾರಿಕೆ ಸ್ಥಾಪಿಸಿದ್ದಾರೆ, ಎಲ್ಲಿ, ಎಷ್ಟೆಷ್ಟು ಖಾಲಿ ಇದೆ, ಕೈಗಾರಿಕೆಗಳಲ್ಲಿ ಎಷ್ಟು ಜನರಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ, ಗುತ್ತಿಗೆ ಸಂಸ್ಥೆಗಳು ಕಾರ್ಮಿಕರಿಗೆ ಸರಿಯಾಗಿ ವೇತನ ಪಾವತಿಸುತ್ತಿವೆಯೇ ಎಂಬ ಬಗ್ಗೆ ಸಮಗ್ರ ಮಾಹಿತಿ ಒದಗಿಸಬೇಕು ಎಂದು ತಾಕೀತು ಮಾಡಿದರು.
ಜಿಲ್ಲೆಯಲ್ಲಿ ಜನೌಷಧ ಮಳಿಗೆ ಹೆಚ್ಚು ತೆರೆಯದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ಅಧಿಕಾರಿಗಳೇ ಮೆಡಿಕಲ್ ಸ್ಟೋರ್ಸ್ ಜತೆ ಶಾಮೀಲಾಗಿ ಜನೌಷಧ ಮಳಿಗೆ ಮುಚ್ಚಿಸಲಾಗುತ್ತಿದೆಯೇ ಎಂದು ಶಂಕೆ ವ್ಯಕ್ತಪಡಿಸಿದಾಗ ಜಿಲ್ಲೆಯಲ್ಲಿ 2000ಕ್ಕೂ ಅಧಿಕ ಖಾಸಗಿ ಮೆಡಿಕಲ್ ಸ್ಟೋರ್ ಇವೆ. ಜನೌಷಧ ಮಳಿಗೆ ತೆರೆಯಲು ಬಂದಿದ್ದ 4 ಅರ್ಜಿಗಳನ್ನು ಅನುಮೋದನೆಗೆ ಸಲ್ಲಿಸಲಾಗಿದೆ ಎಂದು ಡಿಎಚ್‌ಒ ಡಾ.ಜಗದೀಶ್ ನುಡಿದರೆ ಮತ್ತೊಮ್ಮೆ ಅರ್ಜಿ ಆಹ್ವಾನಿಸುವಂತೆ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಸೂಚಿಸಿದರು.
ಎಫ್‌ಪಿಒಗಳ ಸಭೆ: ಹಣ್ಣು, ತರಕಾರಿಗಳನ್ನು ದೂರದ ರಾಜ್ಯಗಳಿಗೆ ಸಾಗಿಸಲು ಕಿಸಾನ್ ರೈಲಿಗೆ ಚಾಲನೆ ನೀಡಲಾಗಿದೆ. ಸಾಗಾಟ ವೆಚ್ಚದಲ್ಲಿ ಶೇ.50 ರಿಯಾಯಿತಿ ಇರುವುದರಿಂದ ರೈತರಿಗೆ ಅನುಕೂಲ. ದೇಶದಲ್ಲಿ 10,000 ಎಫ್‌ಪಿಒಗಳ ಸ್ಥಾಪನೆ ಗುರಿಯನ್ನು ಸರ್ಕಾರ ಹೊಂದಿದೆ. ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆಯಿಂದ ರಚಿಸಿರುವ 5 ಎಫ್‌ಪಿಒಗಳಲ್ಲಿ 4500 ಸದಸ್ಯರಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಜು.5ರಂದು ಎಫ್‌ಪಿಒಗಳ ಸಭೆ ಕರೆದಿದ್ದು, ಜಿಲ್ಲೆಯವರನ್ನೂ ಕಳುಹಿಸಿಕೊಡುವಂತೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಎಂ. ಗಾಯತ್ರಿಗೆ ಸೂಚಿಸಿದರು.
ಆರ್‌ಟಿಐ-ಬ್ಲ್ಯಾಕ್‌ಮೇಲ್: ಜಿಲ್ಲೆಯಲ್ಲಿ ಆರ್‌ಟಿಐನಡಿ ಒಬ್ಬೊಬ್ಬರು 30ರಿಂದ 50 ಅರ್ಜಿ ಹಾಕಿಕೊಂಡು ಅಧಿಕಾರಿಗಳನ್ನು ಬೆದರಿಸುವವರು ಹೆಚ್ಚುತ್ತಿದ್ದಾರೆ. ಸರ್ಕಾರಿ ಜಮೀನು ಉಳಿಸುವವರಿದ್ದರೆ ಅಂತಹವರನ್ನು ಗೌರವಿಸೋಣ, ಎಂಪಿ, ಎಂಎಲ್‌ಎ ಇನ್ಯಾರದೋ ಹೆಸರು ಹೇಳಿಕೊಂಡು ಬ್ಲ್ಯಾಕ್ ಮೇಲೆ ಮಾಡುವವರ ಪಟ್ಟಿ ನೀಡಿ, ಮಟ್ಟಹಾಕಿ ಎಂದು ನೂತನ ಎಸ್ಪಿಗೆ ಸೂಚಿಸಿದರು.
ಎಸಿಬಿಗೆ ದೂರು ನೀಡುವೆ: ಅಮೃತ್ ಯೋಜನೆಯಡಿ ಪಾರ್ಕ್ ಅಭಿವೃದ್ಧಿಗೆ 6 ಕೋಟಿ ರೂ. ಖರ್ಚು ಮಾಡಲಾಗಿದೆ. ನಗರದ ಟಮಕದಲ್ಲಿನ ಪಾರ್ಕ್‌ನಲ್ಲಿ ಸಸಿ ನೆಡುವುದು ಹಾಗೂ ಮಹಾಲಕ್ಷ್ಮೀ ಬಡಾವಣೆಯ ಪಾರ್ಕ್ ಕೆಲಸ ಪೂರ್ಣಗೊಳಿಸದಿದ್ದರೆ ನಾನೇ ಎಸಿಬಿಗೆ ದೂರು ನೀಡುತ್ತೇನೆಂದು ನಗರಾಭಿವೃದ್ಧಿ ಕೋಶದ ಇಂಜಿನಿಯರ್ ರಾಮಮೂರ್ತಿಗೆ ಎಚ್ಚರಿಸಿದರು.
ಜಿಲ್ಲೆಯಲ್ಲಿ ರಾಜಕಾರಣಿಗಳನ್ನು ಮೆಚ್ಚಿಸುವ ಕೆಲಸ ಅಧಿಕಾರಿಗಳಿಂದ ಆಗುತ್ತದೆ. ಆ ಕೆಲಸ ಮಾಡಬೇಡಿ, ಜನರನ್ನು ಮೆಚ್ಚಿಸಿ. ಮನಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡಬೇಡಿ. ನಾನು ಟೌನ್‌ನಲ್ಲಿ ಇರುವ ಎಂಪಿ ಅಲ್ಲ, ಹಳ್ಳಿಗಳಲ್ಲಿ ಜಾಸ್ತಿ ಇರುತ್ತೇನೆ, ಸಂಸದ ಎಂಬ ಲೆಕ್ಕಾಚಾರದಲ್ಲೂ ನಾನಿಲ್ಲ, ಪ್ರತಿ ಶನಿವಾರ ಸ್ವಚ್ಛ ಭಾರತ ಅಭಿಯಾನದಡಿ ಕೆರೆ, ಕಲ್ಯಾಣಿಗಳ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿವೆ ಎಂದು ಮುನಿಸ್ವಾಮಿ ಹೇಳಿದರು. ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಪಂ ಸಿಇಒ ಎನ್.ಎಂ. ನಾಗರಾಜ್, ಎಸ್ಪಿ ಕಿಶೋರ್ ಬಾಬು, ದಿಶಾ ಸಮಿತಿ ಸದಸ್ಯರಾದ ಸಾ.ಮಾ.ಬಾಬು, ಕಮಲನಾಥ್, ದಾಕ್ಷಾಯಿಣಿ, ಜಿಪಂ ಉಪಕಾರ್ಯದರ್ಶಿ ಕೆ.ಪಿ.ಸಂಜೀವಪ್ಪ ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.
ಕರೊನಾ ಕೇರ್ ಸೆಂಟರ್ ಆಗಿರುವ ಬಿಜಿಎಂಎಲ್ ಆಸ್ಪತ್ರೆಯನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗಲು 1 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಕೇಂದ್ರ ಗಣಿ ಸಚಿವರು ತಿಳಿಸಿರುವುದರಿಂದ ಈ ಬಗ್ಗೆ ಡಿಎಚ್‌ಒ ಪಟ್ಟಿ ಸಲ್ಲಿಸಬೇಕು. ಎಸ್.ಮುನಿಸ್ವಾಮಿ, ಸಂಸದ