ಜಿಲ್ಲೆ

ಜನರನ್ನು ಕಚೇರಿಗೆ ಅಲೆಸಿದರೆ ಕಠಿಣ ಕ್ರಮ:  ಲೋಕಾಯುಕ್ತ ಇನ್‌ಸ್ಪೆಕ್ಟರ್ ಸಲೀಂ ನದೀಮ್ ಹೇಳಿಕೆ

ಗುಡಿಬಂಡೆ: ಸಾರ್ವಜನಿಕರ ಕೆಲಸ ಮಾಡಿಕೊಡದೆ ಕಚೇರಿಗಳಿಗೆ ಅಲೆದಾಡಿಸುವ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದರೆ ಅಂತಹ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಇನ್‌ಸ್ಪೆಕ್ಟರ್ ಸಲೀಂನದೀಮ್ ಹೇಳಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದು-ಕೊರತೆ ಸಭೆಯಲ್ಲಿ ಮಾತನಾಡಿ, ಸಾರ್ವಜನಿಕರ ಕೆಲಸ ಮಾಡಿಕೊಡಲು ನಿರ್ಲಕ್ಷಿಸುವ ಅಧಿಕಾರಿಗಳ ವಿರುದ್ಧ ಲಿಖಿತ ರೂಪದಲ್ಲಿ ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ದೂರುಗಳು: 2 ವರ್ಷಗಳ ಹಿಂದೆ ಹಂಪಸಂದ್ರ ಗ್ರಾಪಂ ವ್ಯಾಪ್ತಿಯ ಕೊಂಡರೆಡ್ಡಿಹಳ್ಳಿಯ ಒಟ್ಟು 58 ಜನರಿಗೆ ನಿವೇಶನ ನೀಡಿದ್ದು, ಇದರಲ್ಲಿ ಕೇವಲ 28 ಜನರಿಗೆ ಮಾತ್ರ ಹಕ್ಕು ಪತ್ರ ನೀಡಿದ್ದಾರೆ. ಹಕ್ಕುಪತ್ರಗಳ ಜೆರಾಕ್ಸ್ ನೀಡಿದ್ದು ಖಾತೆ ಮಾಡಿಸಲು ಪಂಚಾಯಿತಿಗೆ ಹೋದರೆ ಒರಿಜನಲ್ ಹಕ್ಕು ಪತ್ರ ತನ್ನಿ ಎಂದು ಪ್ರತಿ ದಿನ ಕಚೇರಿಗೆ ಅಲೆದಾಡಿಸುತ್ತಿದ್ದಾರೆ ಎಂದು ಕೊಂಡರೆಡ್ಡಿಹಳ್ಳಿಯ ಚಿಕ್ಕನರಸಿಂಹಪ್ಪ ದೂರು ನೀಡಿದರು.

ಗ್ರಾಮದ ರಸ್ತೆ ವಿಸ್ತರಣೆ ವೇಳೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದವರ ಮನೆಗಳು ಧ್ವಂಸ ಮಾಡಿದ್ದು, ಅವರಿಗೆ ನಿವೇಶನ ನೀಡುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ ಎಂದು ಕಡೇಹಳ್ಳಿ ಕದಿರಪ್ಪ ಅಳಲು ತೋಡಿಕೊಂಡರು.

ಇದಕ್ಕೆ ಉತ್ತರಿಸಿದ ತಹಸೀಲ್ದಾರ್ ಸಿಗ್ಬತ್‌ಉಲ್ಲಾ, ತಾಲೂಕಿನಾದ್ಯಂತ 30 ಎಕರೆ ಸರ್ಕಾರಿ ಜಮೀನನ್ನು ನಿವೇಶನಗಳಿಗಾಗಿ ಕಾಯ್ದಿರಿಸಲಾಗಿದ್ದು, ಕೆಲವೆಡೆ ಒತ್ತುವರಿ ಆಗಿದೆ, ಅದನ್ನು ಗುರುತಿಸಿ ಹಂತ ಹಂತವಾಗಿ ನಿವೇಶನಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.

ಸಾರ್ವಜನಿಕ ಕುಂದುಕೊರತೆ ಸಭೆಗಳಿಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಾಗುತ್ತಿಲ್ಲ ಎಂದು ಬೀಚಗಾನಹಳ್ಳಿ ಜೀವಿಕ ಸಂಚಾಲಕ ನಾರಾಯಣಸ್ವಾಮಿ ಅಧಿಕಾರಿಗಳ ವಿರುದ್ಧ ದೂರು ನೀಡಿದರು.

ಬಡವರ ದಾಖಲೆ ಸಿಗಲ್ಲ: ಹಕ್ಕು ಪತ್ರಗಳು, ಪಹಣಿಗಳು ಸೇರಿ ಅನೇಕ ಹಳೇ ದಾಖಲೆಗಳನ್ನು ಪಡೆಯಲು ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರೆ ದಾಖಲೆಗಳು ಶಿಥಿಲಗೊಂಡಿವೆ ಎಂದು ಹಿಂಬರಹ ನೀಡುತ್ತಾರೆ. ಆದೇ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಎ್ಲ ದಾಖಲೆಗಳನ್ನು ನೀಡುತ್ತಾರೆ, ಅಧಿಕಾರಿಗಳು ಯಾರ ಪರ ಕೆಲಸ ನಿರ್ವಹಿಸುತ್ತಿದ್ದಾರೆ ಎಂಬುವುದನ್ನು ತಿಳಿಸಬೇಕು ಎಂದು ಬ್ರಾಹ್ಮಣರಹಳ್ಳಿ ಗಂಗರಾಜು ಲೋಕಾಯುಕ್ತ ಅಧಿಕಾರಿಗಳಿಗೆ ಪ್ರಶ್ನಿಸಿದರು.

ಗ್ರೇಡ್-2 ತಹಸೀಲ್ದಾರ್ ಮಹೇಶ್, ತಾಲೂಕು ಕಾರ್ಯನಿರ್ವಹಣಾಧಿಕಾರಿ ರವೀಂದ್ರ, ಪೊಲೀಸ್ ಇನ್‌ಸ್ಪೆಕ್ಟರ್ ಮೋಹನ್, ಕೃಷಿ ಇಲಾಖೆಯ ಅಮರನಾರಾಯಣರೆಡ್ಡಿ, ಉಪನೋಂದಣಾಧಿಕಾರಿಗಳ ಕಚೇರಿಯ ಗಾಯಿತ್ರಿ, ಬಿಸಿಎಂ ಇಲಾಖೆಯ ವಿಸ್ತರಣಾಧಿಕಾರಿ ರಾಮಯ್ಯ, ತಾಲೂಕು ಆರೋಗ್ಯಾಧಿಕಾರಿ ನರಸಿಂಹಮೂರ್ತಿ ಇತರರಿದ್ದರು.

ದಲ್ಲಾಳಿಗಳ ಹಾವಳಿ: ತಾಲೂಕು ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದು, ರೈತರು ಕಚೇರಿಗೆ ಬಂದರೆ ಕೆಲಸಗಳು ಆಗುವುದಿಲ್ಲ. ಅದೇ ದಲ್ಲಾಳಿಗಳ ಮೂಲಕ ಹೋದರೆ ಕೆಲವೇ ಗಂಟೆಗಳಲ್ಲಿ ಕೆಲಸ ಮಾಡಿಕೊಡುತ್ತಾರೆ ಎಂದು ರೈತ ಸಂಘದ ಮುಖಡರು ಮೌಖಿಕವಾಗಿ ದೂರಿದರು.

ಇತ್ಯರ್ಥವಾಗದ ದೂರುಗಳು: ಸಾರ್ವಜನಿಕರ ಕುಂದುಕೊರತೆ ಸಭೆಗೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಗೈರಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಸಭೆ ನಡೆಸಿಕೊಟ್ಟರು.ದೂರುಗಳನ್ನು ಮಾತ್ರ ಸ್ವೀಕರಿಸಲಾಯಿತು. ಆದರೆ ಯಾವುದೇ ದೂರು ಸ್ಥಳದಲ್ಲಿ ಇತ್ಯರ್ಥವಾಗಲಿಲ್ಲ.