ಕಂಪ್ಲಿ: ನಿಗದಿತ ಕಾಲಮಿತಿಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರ್ಕಾರಿ ಅಧಿಕಾರಿಗಳು ಬದ್ಧತೆ ತೋರಬೇಕು ಎಂದು ಬಳ್ಳಾರಿ ಲೋಕಾಯುಕ್ತ ನಿರೀಕ್ಷಕ ನಾಗರೆಡ್ಡಿ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿ ಸಭಾಂಗಣದಲ್ಲಿ ಲೋಕಾಯುಕ್ತರಿಂದ ಅಹವಾಲು ಸ್ವೀಕಾರ ಸಮಾರಂಭದಲ್ಲಿ ಗುರುವಾರ ಮಾತನಾಡಿದರು. ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರ ಆಶೋತ್ತರಗಳನ್ನು ಅರಿತು ಕಾನೂನಿನಡಿ ಕಾರ್ಯನಿರ್ವಹಿಸಬೇಕು. ಜನರನ್ನು ವಿನಾಕಾರಣ ಕಚೇರಿಗೆ ಅಲೆದಾಡಿಸುವುದನ್ನು ತಪ್ಪಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ತಾಕೀತು ಮಾಡಿದರು.
ಲೋಕಾಯುಕ್ತ ಅಹವಾಲು ಸ್ವೀಕಾರ ಸಭೆಗೆ ಇಲಾಖೆಗಳ ಉನ್ನತಾಧಿಕಾರಿಗಳೇ ಸಂಪೂರ್ಣ ಮಾಹಿತಿಯೊಂದಿಗೆ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಕಳೆದ ಸಭೆಯಲ್ಲಿ ಸಾರ್ವಜನಿಕರಿಂದ ಸ್ವೀಕರಿಸಿದ್ದ ಎಂಟು ಅರ್ಜಿಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ನಾಗರೆಡ್ಡಿ ತಿಳಿಸಿದರು.
ಕಂದಾಯ ಇಲಾಖೆಗೆ ಸಂಬಂಧಿಸಿದ ಎರಡು, ಸರ್ವೇ, ಶಿಕ್ಷಣ, ಆರಕ್ಷಕ ಇಲಾಖೆಗೆ ಸಂಬಂಧಿಸಿದ ತಲಾ ಒಂದು ಅರ್ಜಿ ಸಲ್ಲಿಕೆಯಾಯಿತು. ತಹಸೀಲ್ದಾರ್ ಎಸ್.ಶಿವರಾಜ, ತಾಪಂ ಇಒ ಆರ್.ಕೆ.ಶ್ರೀಕುಮಾರ್, ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ, ಪಿಎಸ್‌ಐ ಅವಿನಾಶ್ ಕಾಂಬ್ಳೆ, ಲೋಕಾಯುಕ್ತ ಸಿಬ್ಬಂದಿ ದಾಸಪ್ಪ, ಅಂಜಿನಪ್ಪ, ಹೊನ್ನೂರಪ್ಪ ಇತರರಿದ್ದರು.