ಹಾಸನ : ನಮ್ಮನ್ನು ಜೈಲಿಗೆ ಹಾಕಿದರೂ ನಮ್ಮ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ನಾವು ಸದಾ ಕಾಲ ನಮ್ಮ ಜನರನ್ನು ಎಚ್ಚರಿಸುತ್ತೇವೆ, ನಮ್ಮ ನೀರನ್ನು ಉಳಿಸಿಕೊಳ್ಳುತ್ತೇವೆ ಎಂದು ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಳ್ಳು ಗೋಪಾಲ್ ಅವರು ಎಚ್ಚರಿಕೆ ನೀಡಿದರು.
ಶುಕ್ರವಾರ ಕರ್ನಾಟಕ ಬಂದ್ ಪ್ರಯುಕ್ತ ನಗರದಲ್ಲಿ ಶುಕ್ರವಾರ ಬೆಳಗ್ಗೆ ಪ್ರತಿಭಟನಾಕಾರರೊಂದಿಗೆ ಬಸ್ ಸಂಚಾರ ತಡೆಗೆ ಮುಂದಾದಾಗ ಪೊಲೀಸರು ಅವರನ್ನು ಸೇರಿ ಎಂಟು ಪ್ರತಿಭಟನಕಾರರನ್ನು ಬಂಧಿಸಿ ಕರೆದೊಯ್ದರು. ಬಂಧನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಾಳ್ಳುಗೋಪಾಲ್ ಅವರು, ರಾಜ್ಯದ ರೈತರ ಹಾಗೂ ಜನರ ಹಿತವನ್ನು ಸರ್ಕಾರ ಕಾಯಬೇಕು. ನಾವು ರಾತ್ರೋರಾತ್ರಿ ಹೋರಾಟ ಮಾಡುತ್ತಿಲ್ಲ. ನಮ್ಮ ಹೇಮಾವತಿಯಲ್ಲಿ 34 ಟಿಎಂಸಿ ನೀರಿದ್ದಾಗಲೇ, ಮುಂಗಾರು ಕಡಿಮೆಯಾಗಿದೆ. ಹಿಂಗಾರು ಬರುತ್ತದೋ ಇಲ್ಲವೋ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ನಮಗೆ ಕುಡಿಯಲು ನೀರು ಸಿಗದ ಪರಿಸ್ಥಿತಿ ಎದುರಾಗಲಿದೆ. ಹೀಗಾಗಿ ತಮಿಳುನಾಡಿಗೆ ನೀರು ಬಿಡುವುದು ಬೇಡ ಎಂದು ಎಚ್ಚರಿಕೆ ನೀಡಲಾಯಿತು. ಈಗಲೂ ನೀರು ಬಿಡುತ್ತಿದ್ದರೆ ಅದನ್ನು ನೋಡಿಕೊಂಡು ಸುಮ್ಮನೆ ಕೂರುವುದು ಹೇಗೆ? ಎಂದು ಪ್ರಶ್ನಿಸಿದರು.
ಸರ್ಕಾರ ಕೋಟ್ಯಂತರ ರೂ. ಹಣ ಕೊಟ್ಟು ತಜ್ಞ ವಕೀಲರ ತಂಡವನ್ನು ನೇಮಿಸಿಕೊಂಡಿದೆ. ಆದರೆ, ತಜ್ಞರು ಸರಿಯಾದ ಅಂಕಿ-ಅಂಶಗಳನ್ನು ನ್ಯಾಯಾಲಯದಲ್ಲಿ ಮಂಡಿಸುವಲ್ಲಿ ವಿಫಲರಾಗಿದ್ದಾರೆ. ಅನುಭವಿ ಮಂತ್ರಿಗಳು ಕೂಡ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಕಾವೇರಿ ಹೋರಾಟ ಆರಂಭವಾದಾಗ ಕೇಂದ್ರದಿಂದ ಇವರಿಗೆ ಒಂದು ಸಂದೇಶ ಬರುತ್ತದೆ. ತಮಿಳುನಾಡಿನಲ್ಲಿ 40 ಲೋಕಸಭಾ ಸೀಟುಗಳಿವೆ. ಅವುಗಳನ್ನು ಪಡೆಯಲು ನಮ್ಮ ಕರ್ನಾಟಕದ ಜನರನ್ನು ಬಲಿ ಕೊಡಲಾಗುತ್ತಿದೆ. ನೀರು ಇದ್ದರೆ ಬಿಡಲಿ. ಆದರೆ, ನೀರೇ ಇಲ್ಲದಿರುವಾಗ ಕದ್ದುಮುಚ್ಚಿ ಬಿಡಲಾಗುತ್ತಿದೆ. ಇವರು ನಮ್ಮ ಪ್ರತಿನಿಧಿಯಾಗಿ ನಮ್ಮ ಪರವಾಗಿ ನಿಲ್ಲಬೇಕಾ ಅಥವಾ ಪಕ್ಕದ ರಾಜ್ಯದ ಪರವಾಗಿ ನಿಲ್ಲಬೇಕಾ? ಇವರ ದುರಾಳಿತಕ್ಕೆ ಜನರು ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಸರ್ಕಾರದ ನಡೆಯನ್ನು ಪ್ರಶ್ನೆ ಮಾಡಿ ಹೋರಾಟ ಮಾಡುವ ಹೋರಾಟಗಾರರನ್ನು ಹತ್ತಿಕ್ಕಲಾಗುತ್ತಿದೆ. ನಾವು ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದೆವು. ಸಾರ್ವಜನಿಕ ಆಸ್ತಿಗೆ ಹಾನಿ ಉಂಟು ಮಾಡಿಲ್ಲ. ಹೀಗಿರುವಾಗ ನಮ್ಮನ್ನು ಬಂಧಿಸಲಾಗಿದೆ. ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಬಂದು ಒಂದೂವರೆ ತಿಂಗಳಾಯಿತು. ಇಂದು ಜಿಲ್ಲೆಯ ಲಕ್ಷಾಂತರ ಹೆಕ್ಟೇರ್ ಪ್ರದೇಶದ ಬೆಳೆ ನಷ್ಟವಾಗಿದೆ. ಪರಿಸ್ಥಿತಿ ಹೀಗೆ ಇರುವಾಗ ನಾವು ಹೋರಾಟ ಮಾಡಬಾರದಾ? ನಾವು ಬಸ್ಸಿಗೆ ಕಲ್ಲು ಹೊಡೆದಿಲ್ಲ. ಸಾರ್ವಜನಿಕ ಆಸ್ತಿಗೆ ಹಾನಿ ಉಂಟು ಮಾಡಿಲ್ಲ, ಸಾರ್ವಜನಿಕರಿಗೆ ತೊಂದರೆ ನೀಡಿಲ್ಲ. ಬಸ್ ಬಿಡಬೇಡಿ ಎಂದು ತಡೆಯಲು ಮುಂದಾದಾಗ ದುಂಡಾವರ್ತನೆ ತೋರಿ ನಮ್ಮನ್ನು ಬಂಧಿಸಲಾಗಿದೆ. ನಮ್ಮನ್ನು ಜೈಲಿಗೆ ಹಾಕಿದರೂ ನಮ್ಮ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಹೇಳಿದರು.
ಇವರೊಂದಿಗೆ ಆಟೋ ಸಂಘದ ಜಿಲ್ಲಾಧ್ಯಕ್ಷ ಜಾನ್, ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದಿನೇಶ್ ಗೌಡ, ಕರವೇ ಪ್ರವೀಣ್ ಶೆಟ್ಟಿ ಬಣದ ನಗರ ಯುವ ಘಟಕ ಉಪಾಧ್ಯಕ್ಷ ಸಿ.ಆರ್. ಯೋಗೇಶ್, ಅಧ್ಯಕ್ಷ ಮನೋಜ್, ಟಿ.ಬಿ. ಸತೀಶ್ ಅವರನ್ನು ಬಂಧಿಸಿ ಸಂಜೆ ಬಿಡುಗಡೆ ಮಾಡಲಾಯಿತು.