ಜಿಲ್ಲೆ

ಜನರ ಹೊಟ್ಟೆ ಮೇಲೆ ಬಿಜೆಪಿ ಬರೆ

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಜನರ ಹಕ್ಕನ್ನು ಕಿತ್ತುಕೊಳ್ಳುವ ಜತೆಗೆ ಶೇ.40 ಲಂಚದ ಹಣದಲ್ಲಿ ಸರ್ಕಾರ ನಡೆಸುತ್ತಿರುವ ಬಿಜೆಪಿ, ರಾಜ್ಯದ ಜನರ ಹೊಟ್ಟೆಯ ಮೇಲೆ ಬರೆ ಎಳೆಯುತ್ತಿದೆ ಎಂದು
ಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್
ಸಿಂಗ್ ಸುರ್ಜೇವಾಲ ಟೀಕಿಸಿದರು.
ನಗರದ ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಬುಧವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಕ್ಷದ ಪ್ರಣಾಳಿಕೆಯಾದ
ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಹಾಗೂ ಕುಟುಂಬದ ಯಜಮಾನತಿಗೆ ಪ್ರತಿ ತಿಂಗಳು 2000 ಹಣ ವರ್ಗಾವಣೆ ಮಾಡುವ ಕಾರ್ಡ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯ ಸರ್ಕಾರದಲ್ಲಿ ಯಾವುದೇ ಕೆಲಸಕ್ಕೂ ಶೇ.40 ಕೊಡಬೇಕು. ಈ ಬಗ್ಗೆ ಕೆಲವು ಖಾಸಗಿ ಶಾಲೆಗಳ ಸಂಘದವರು ಪ್ರಧಾನಿಗೆ ದೂರು ನೀಡಿದ್ದಾರೆ, ಆದರೆ ಇಲ್ಲಿಯವರೆಗೆ ಪ್ರಧಾನಿ ಇದಕ್ಕೆ ಕಿವಿಕೊಟ್ಟಿಲ್ಲ. ಈ ಅಕ್ರಮಗಳ ಹಿಂದೆ ರಾಜ್ಯ ಸರ್ಕಾರದ ಮಂತ್ರಿಗಳು ಹಾಗೂ
ಶಾಸಕರಿರುವ ಆಡಿಯೋಗಳಿವೆ ಎಂದರು.
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಅಡುಗೆ ಅನಿಲದ ಬೆಲೆ 400 ರೂ. ಇತ್ತು. ಆದರೆ ಬಿಜೆಪಿ ಸರ್ಕಾರದಲ್ಲಿ 1200 ರೂ.ಆಗಿದೆ. ಅದೇ ರೀತಿ ಪೆಟ್ರೋಲ್ 70 ರಿಂದ 110 ರೂ.ಗೆ ಏರಿಕೆಯಾಗಿದೆ. ಜತೆಗೆ ಎಲ್ಲ ಆಹಾರ ಪದಾರ್ಥಗಳ ಬೆಲೆ ಗಗನಮುಖಿಯಾಗಿದೆ. ಇಂಥ ಪರಿಸ್ಥಿತಿಯಲ್ಲಿ ಜನಸಾಮಾನ್ಯವರು ಜೀವನ ನಡೆಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಬಿಜೆಪಿಯದು ಹುಸಿ ಭರವಸೆ: ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ 600ಕ್ಕೂ ಹೆಚ್ಚು ಆಶ್ವಾಸನೆ ನೀಡಿತ್ತು. ಆದರೆ ಜಾರಿಗೆ ಬಂದದ್ದು ಕೇವಲ 60 ಮಾತ್ರ, ಅದಕ್ಕೂ ಮೊದಲು ಕಾಂಗ್ರೆಸ್ ಸರ್ಕಾರ ಸುಮಾರು 160 ಆಶ್ವಾಸನೆ ನೀಡಿ 160ನ್ನೂ ಈಡೇರಿಸಿ, ಇನ್ನೂ ಅನೇಕ ಯೋಜನೆಗಳನ್ನು ಜಾರಿಗೆ ತಂದು ಜನಪರ ಸರ್ಕಾರ ಎಂದು ಗುರುತಿಸಿಕೊಂಡಿತ್ತು ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಲಂಚದ ಹಣದಲ್ಲಿ ಎಂಟಿಬಿಗೂ ಪಾಲಿದೆ: ಕೆಲ ತಿಂಗಳ ಹಿಂದೆ ಕೆ.ಆರ್.ಪುರ ಇನ್‌ಸ್ಪೆಕ್ಟರ್ ನಂದೀಶ್ ಆತ್ಮಹತ್ಯೆ ಪ್ರಕರಣದ ಸಂದರ್ಭದಲ್ಲಿ ಕೋಟಿ ಕೋಟಿ ಹಣ ಲಂಚ ನೀಡಿ ಪೋಸ್ಟಿಂಗ್ ಹಾಕಿಸಿಕೊಂಡು ದುಡಿಯಲಾಗದೆ ಆತ್ಮಹತ್ಯೆ ಮಾಡಿಕೊಂಡ ಎಂದು ನುಡಿದಿದ್ದ ಸಚಿವ ಎಂಟಿಬಿ ನಾಗರಾಜ್ ವಿಡಿಯೋ ವೈರಲ್ ಆಗಿತ್ತು. ಆ ಲಂಚದ ಹಣದಲ್ಲಿ ಎಂಟಿಬಿ ನಾಗರಾಜ್‌ಗೂ ಪಾಲಿದೆ ಎಂದು ಸುರ್ಜೇವಾಲ ಆರೋಪಿಸಿದರು. ಪಿಎಸ್‌ಐ ಹುದ್ದೆಗೆ 80 ಲಕ್ಷ ರೂ., ಶಾಲಾ-ಕಾಲೇಜು ಉಪನ್ಯಾಸಕರ ನೇಮಕಾತಿಗೆ ತೆರೆದ ಮಾರುಕಟ್ಟೆಯಲ್ಲಿ ಲಂಚ ಪಡೆಯಲಾಗುತ್ತಿದೆ. ಯುವಕರು ಆಸ್ತಿ ಮಾರಿ ಲಂಚ ನೀಡುವ ಪರಿಸ್ಥಿತಿಗೆ ಬಂದಿದ್ದಾರೆ, ಇದರಿಂದ ಭ್ರಷ್ಟಸಮಾಜ ನಿರ್ಮಾಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಂಘಟನೆಗೆ ಶರತ್ ಕರೆ: ಹೊಸಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ, ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಸೋಲಿನ ಹತಾಶೆಯಲ್ಲಿ ಕೆಲವರು ಒಡಕಿನ ಮಾತನಾಡುತ್ತಾರೆ. ಕಾರ್ಯಕರ್ತರು ಯಾವುದಕ್ಕೂ ಕಿವಿಗೊಡದೆ ಸಂಘಟಿಸಿ ಎಂದು ಶಾಸಕ ಶರತ್‌ಬಚ್ಚೇಗೌಡ ಕರೆ ನೀಡಿದರು.