ನೆಲಜಿ ಗ್ರಾಮದ ಅಂಬಲ ಮಹಿಳಾ ಸಮಾಜದ ವತಿಯಿಂದ ನೆಲಜಿ ದವಸ ಭಂಡಾರದ ಕಟ್ಟಡದಲ್ಲಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಮಂಡೆಪಂಡ ಸುಜಾ ಕುಶಾಲಪ್ಪ, ಪದ್ಮಶ್ರೀ ಪುರಸ್ಕೃತೆ ರಾಣಿ ಮಾಚಯ್ಯ, ಮಡಿಕೇರಿ ಆಕಾಶವಾಣಿಯ ನಿವೃತ್ತ ಉದ್ಘೋಷಕಿ ಕೂಪದಿರ ಶಾರದಾ ನಂಜಪ್ಪ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಅಪ್ಪುಮಣಿಯಂಡ ಡೇಝಿ ಸೋಮಣ್ಣ, ಮಂಡೀರ ಸರೋಜಾ ದೇವಯ್ಯ , ತೀತೀರ ಧರ್ಮಜ ಉತ್ತಪ್ಪ, ಮಣವಟ್ಟೀರ ಕಮಲ ಬೆಳ್ಳಿಯಪ್ಪ ಇತರರು ಇದ್ದರು.  
ಜಿಲ್ಲೆ

ಜನರ ಸಹಕಾರಿಂದ ಮಾತ್ರ ಕ್ಷೇತ್ರದ ಅಭಿವೃದ್ಧಿ

ಶಿವಶಂಕರ್ ಎಂ. ಹೆಬ್ಬಳ್ಳ

ನಾಪೋಕ್ಲು: ಜನಬೆಂಬಲ ಇದ್ದರೆ ಮಾತ್ರ ಕ್ಷೇತ್ರದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಜನರ ಮನಸ್ಸಿನಲ್ಲಿ ಉಳಿಯುವ ಹಾಗೂ ಜನರ ಧ್ವನಿಯಾಗಿ ಕೆಲಸ ಮಾಡಲು ಎಲ್ಲರ ಸಹಕಾರ ಅಗತ್ಯ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.

ನೆಲಜಿ ಗ್ರಾಮದ ಅಂಬಲ ಮಹಿಳಾ ಸಮಾಜದ ವತಿಯಿಂದ ಶನಿವಾರ ನೆಲಜಿ ದವಸ ಭಂಡಾರದ ಕಟ್ಟಡದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಜನರಿಗೆ ಒಳ್ಳೆಯದಾಗಬೇಕು. ಕ್ಷೇತ್ರದ ಅಭಿವೃದ್ಧಿ ಆಗಬೇಕು ಎಂಬುದಷ್ಟೇ ನನ್ನ ಗುರಿಯಾಗಿದೆ. ಜಿಲ್ಲೆಯ ಜನರಿಗೆ ಒಳಿತನ್ನು ಮಾಡುವುದಷ್ಟೇ ನನ್ನ ಕೆಲಸ. ಮುಂದಿನ ಜನಾಂಗಕ್ಕೆ ಆಚಾರ, ವಿಚಾರ, ಭಾಷೆ , ಸಂಸ್ಕೃತಿಯನ್ನು ಉಳಿಸುವ ಬಗ್ಗೆ ಚಿಂತಿಸುವ ಕಾಲ ಬಂದಿದೆ. ಸಂಘ-ಸಂಸ್ಥೆಗಳು ಈ ನಿಟ್ಟಿನಲ್ಲಿ ಯೋಚಿಸಿ ಮುಂದಡಿ ಇಡಬೇಕು ಎಂದು ಸಲಹೆ ನೀಡಿದರು.

ಸನ್ಮಾನ ಸ್ವೀಕರಿಸಿ ವಿಧಾನ ಪರಿಷತ್ ಸದಸ್ಯ ಮಂಡೆಪಂಡ ಸುಜಾ ಕುಶಾಲಪ್ಪ ಮಾತನಾಡಿ, ಮಹಿಳೆಯರು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಈ ಹಿಂದೆ ಮಹಿಳೆಯರು ಮನೆಗೆ ಮಾತ್ರ ಸೀಮಿತ ಎಂದಿತ್ತು. ಆದರೆ ಈಗ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿರುವುದು ಗಮನಾರ್ಹ ಎಂದರಲ್ಲದೆ, ಕೊಡಗಿನ ನೆಲ, ಜಲ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದರು.

ಪದ್ಮಶ್ರೀ ಪುರಸ್ಕೃತೆ ರಾಣಿ ಮಾಚಯ್ಯ ಮಾತನಾಡಿ, ಕೊಡವ ಜಾನಪದ ಕಲೆ, ಸಂಸ್ಕೃತಿಯನ್ನು ಹಿರಿಯರೊಂದಿಗೆ ಸೇರಿ ಮಕ್ಕಳು ಕಲಿಯಬೇಕು. ನಂತರ ಅದನ್ನು ನಿರಂತರವಾಗಿ ಸಂರಕ್ಷಿಸಬೇಕು. ಹಬ್ಬಹರಿದಿನಗಳನ್ನು ಹಿಂದಿನ ಸಂಪ್ರದಾಯದಂತೆ ಆಚರಿಸಬೇಕು. ಹುತ್ತರಿ ಕೈಲ್ ಮುಹೂರ್ತ, ಕಾವೇರಿ ಸಂಕ್ರಮಣ ದಂತಹ ಹಬ್ಬಗಳನ್ನು ಮಕ್ಕಳು ಎಲ್ಲಿದ್ದರೂ ಜಿಲ್ಲೆಗೆ ಬಂದು ಹಿರಿಯರೊಂದಿಗೆ ಸಂಭ್ರಮದಿಂದ ಆಚರಿಸುವಂತಾಗಬೇಕು. ಹಿರಿಯರ ಪದ್ಧತಿ ಪರಂಪರೆಯನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.

ಮಡಿಕೇರಿ ಆಕಾಶವಾಣಿಯ ನಿವೃತ್ತ ಉದ್ಘೋಷಕಿ ಕೂಪದಿರ ಶಾರದಾ ನಂಜಪ್ಪ ಮಾತನಾಡಿ, ಕೊಡವ ಸಂಸ್ಕೃತಿಯನ್ನು ಹಿರಿಯರು ಮಕ್ಕಳಿಗೆ ಕಲಿಸಿಕೊಡಬೇಕು. ಮಹಿಳೆಯರು ಸಂಘ-ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದರೆ ಶಿಸ್ತು, ಪ್ರಾಮಾಣಿಕತೆ, ಯಶಸ್ಸು ಕಾಣಲು ಸಾಧ್ಯ ಎಂದರು.
ಮಡಿಕೇರಿ ಆಕಾಶವಾಣಿಯಲ್ಲಿ ಸಾವಿನ ಸುದ್ದಿ ಪ್ರಸಾರ ಮಾಡುವ ಅಗತ್ಯತೆ ಹಾಗೂ ಅನಿವಾರ್ಯತೆಯನ್ನು ಕುರಿತು ವಿಶೇಷ ಕಾಳಜಿ ವಹಿಸಿ ಕೆಲಸ ನಿರ್ವಹಿಸಿದ್ದರಿಂದ ದೇಶದ ಯಾವುದೇ ಭಾಗದಲ್ಲೂ ಇಲ್ಲದ ರೇಡಿಯೋ ಕಾರ್ಯಕ್ರಮ ಜಿಲ್ಲೆಯಲ್ಲಿ ಪ್ರಸಾರವಾಗುವುದರ ಮೂಲಕ ಜನಮೆಚ್ಚುಗೆಗೆ ಪಾತ್ರವಾಯಿತು ಎಂದರು.

ವಿರಾಜಪೇಟೆಯ ವುಮೆನ್ಸ್ ವಿಂಗ್ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಮಾತನಾಡಿದರು. ಇದಕ್ಕೂ ಮುನ್ನ ಕಕ್ಕಡ ಹಬ್ಬದ ಪ್ರಯುಕ್ತ ನೆಲಜಿ ಶ್ರೀ ಇಗ್ಗುತಪ್ಪ ದೇವಸ್ಥಾನದಲ್ಲಿ ವಿಶೇಷ ಪೂಜೆ ಜರುಗಿತು. ಆ ಬಳಿಕ ದುಡಿ ಕೊಟ್ಟು ತಳಿಯಕ್ಕಿ ಬೋಲಾಕ್‌ನೊಂದಿಗೆ ಅತಿಥಿಗಳನ್ನು ಅದ್ದೂರಿಯಾಗಿ ಸಭೆಗೆ ಬರಮಾಡಿಕೊಳ್ಳಲಾಯಿತು.
ಅಂಬಲ ಮಹಿಳಾ ಸಮಾಜದ ಅಧ್ಯಕ್ಷೆ ಅಪ್ಪುಮಣಿಯಂಡ ಡೇಝಿ ಸೋಮಣ್ಣ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಕಾಫಿ ಬೆಳೆಗಾರರಾದ ಮಂಡೀರ ಸರೋಜಾ ದೇವಯ್ಯ , ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ, ಸಲಹಾ ಸಮಿತಿ ಅಧ್ಯಕ್ಷೆ ಮಣವಟ್ಟೀರ ಕಮಲ ಬೆಳ್ಳಿಯಪ್ಪ, ಮಣವಟ್ಟಿರ ಕಮಲ ಬೆಳ್ಳಪ್ಪ, ಮಣವಟ್ಟಿರ ಝಾನ್ಸಿ ತಿಮ್ಮಯ್ಯ, ಕೋಟೆರ ಹೇಮಾ ಕಾವೇರಪ್ಪ , ಚೀಯಕಪೂವಂಡ ಅಮಿತ ನವೀನ್, ಪ್ರೀತು ಸತೀಶ್, ಮಣವಟ್ಟಿರ ಮೀರಾ ಬಿದ್ದಪ್ಪ ಇತರರು ಇದ್ದರು.