ಜಿಲ್ಲೆ

ಜನರ ಸಹಕಾರ, ಸಹಭಾಗಿತ್ವ ಮುಖ್ಯ

ಹುಬ್ಬಳ್ಳಿ: ಜಗತ್ತನ್ನು ತಲ್ಲಣಗೊಳಿಸಿರುವ ಕರೊನಾ ಮಹಾಮಾರಿ ನಿಯಂತ್ರಣದಲ್ಲಿ ಜನರ ಸಹಕಾರ, ಸಹಭಾಗಿತ್ವ ಅಗತ್ಯವಾಗಿ ಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಭಾನುವಾರ ಸಂಜೆ ನಗರದಲ್ಲಿ ಅಂಜುಮನ್ ಎ ಇಸ್ಲಾಂ ಸಂಸ್ಥೆಯ ವತಿಯಿಂದ ಸ್ಥಾಪಿಸಲಾದ ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿ ಮಾತನಾಡಿದ ಅವರು, ಲಾಕ್​ಡೌನ್ ತೆರವುಗೊಂಡ ಬಳಿಕ ದೇಶದಲ್ಲಿ ಕರೊನಾ ಪ್ರಕರಣಗಳು ಹೆಚ್ಚಿವೆ. ದೇಶದ ಜನಸಾಂದ್ರತೆಗೆ ಹೋಲಿಸಿದರೆ ಕರೊನಾ ನಿಯಂತ್ರಣದಲ್ಲಿದೆ ಎಂದರು.

ಜಿಲ್ಲೆಯಲ್ಲಿ ನಿತ್ಯ ಸರಾಸರಿ 200 ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿದೆ. ಆದರೂ ರೋಗಿಗಳ ಆರೈಕೆಗೆ ಬೆಡ್, ವೈದ್ಯಕೀಯ ಚಿಕಿತ್ಸೆ ಸೌಲಭ್ಯದ ಕೊರತೆ ಇಲ್ಲ. ಅಂಜುಮನ್ ಸಂಸ್ಥೆ 100 ಬೆಡ್ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ. ಇದೇ ರೀತಿ ದೇಶಪಾಂಡೆ ಫೌಂಡೇಶನ್, ಇನ್ನಿತರ ಸಂಘ ಸಂಸ್ಥೆಗಳು ಸಹಕಾರ ನೀಡಿವೆ. ಕರೊನಾ ಸೋಂಕನ್ನು ಎಲ್ಲರೂ ಒಗ್ಗಟ್ಟಿನಿಂದ ಎದುರಿಸಬೇಕಿದೆ ಎಂದು ಹೇಳಿದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಕರೊನಾ ಬಗ್ಗೆ ಭಯ ಬೇಡ. ಹಾಗಂತ ನಿಷ್ಕಾಳಜಿ ಮಾಡಬಾರದು. ಮುಸ್ಲಿಂ ಸಮಾಜಕ್ಕೆ ಹಳೇ ಹುಬ್ಬಳ್ಳಿ ಹಾಗೂ ಕೇಶ್ವಾಪುರದಲ್ಲಿ ಖಬರಸ್ತಾನಕ್ಕೆ ಭೂಮಿ ಮಂಜೂರು ಮಾಡಬೇಕೆಂದು ಕೋರಿದರು.

ಅಂಜುಮನ್ ಎ ಇಸ್ಲಾಂ ಸಂಸ್ಥೆ ಅಧ್ಯಕ್ಷ ಎಂ.ಸಿ. ಸವಣೂರ ಮಾತನಾಡಿ, ಕರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ, ರಾಜ್ಯ ಸರ್ಕಾರ ಹಾಗೂ ವಕ್ಪ್ ಮಂಡಳಿ ಜಾರಿಗೊಳಿಸಿದ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಿದ್ದೇವೆ ಎಂದು ಹೇಳಿದರು.

ಪ್ಲಾಸ್ಮಾ ದಾನಿ ಮೊಹಮ್ಮದ್ ಯೂಸುಫ್ ಗಾಂಜೆವಾಲೆ ಅವರನ್ನು ಸನ್ಮಾನಿಸಲಾಯಿತು. ಶಾಸಕಿ ಕುಸುಮಾವತಿ ಶಿವಳ್ಳಿ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಮಾಜಿ ಸಂಸದ ಐ.ಜಿ. ಸನದಿ, ಅಲ್ತಾಫ್ ಹಳ್ಳೂರ, ಬಶೀರ ಹಳ್ಳೂರ, ಅಲ್ತಾಫ್ ಕಿತ್ತೂರ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಎಸಿ ಮಹಮ್ಮದ್ ಜುಬೇರ, ಇತರರು ಇದ್ದರು.