ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಶನಿವಾರ ಪೊಲೀಸ್ ಇಲಾಖೆ ವತಿಯಿಂದ ಶ್ರೀರಂಗಪಟ್ಟಣ ಉಪವಿಭಾಗದ ವ್ಯಾಪಿಯ ಜನರೊಂದಿಗೆ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಉದ್ಗಾಟಿಸಿರು. 
ಜಿಲ್ಲೆ

ಜನರ ಸಮಸ್ಯೆಗೆ ಹಂತ ಹಂತವಾಗಿ ಪರಿಹಾರ

ಶ್ರೀರಂಗಪಟ್ಟಣ: ಜಿಲ್ಲೆಗೆ ಬಂದಾಗಿನಿಂದಲೂ ಶ್ರೀರಂಗಪಟ್ಟಣ ಉಪವಿಭಾಗ ವ್ಯಾಪ್ತಿಯ ಜನರ ಸಮಸ್ಯೆಗಳ ಆಲಿಸಿ ಅವರೊಂದಿಗೆ ನೇರ ಸ್ಪಂದಿಸಲು ಸಾಧ್ಯವಾಗಿರಲಿಲ್ಲ. ಈಗ ಜನರು ನನ್ನ ಗಮನಕ್ಕೆ ತಂದಿರುವ ಸಮಸ್ಯೆಗಳನ್ನು ಹಂತ ಹಂತವಾಗಿ ಶಮನಗೊಳಿಸಲು ಮುಂದಾಗುವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಭರವಸೆ ನೀಡಿದರು.

ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಶನಿವಾರ ಶ್ರೀರಂಗಪಟ್ಟಣ ಉಪವಿಭಾಗ ವ್ಯಾಪ್ತಿಯ ಶ್ರೀರಂಗಪಟ್ಟಣ ಹಾಗೂ ಪಾಂಡವಪುರ ತಾಲೂಕುಗಳ ವಿವಿಧ ಠಾಣೆಯ ವ್ಯಾಪ್ತಿಯ ವಿವಿಧ ಸಂಘಟನೆಗಳು ಹಾಗೂ ಜನರೊಂದಿಗೆ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜನರಿಂದ ಕೇಳಿ ಬಂದಿರುವ ಮದ್ಯ ಅಕ್ರಮ ಮಾರಾಟ, ಹೆದ್ದಾರಿಯ ಅಪಘಾತಗಳು, ಕೆಳ ಸೇತುವೆ ನಿರ್ಮಾಣ, ಬಾಲ್ಯ ವಿವಾಹ ಹಾಗೂ ಭ್ರೂಣ ಹತ್ಯೆ ಪ್ರಕರಣ ಜಾಗೃತಿ, ಗ್ರಾಮೀಣ ಪ್ರದೇಶದಲ್ಲಿನ ಕಳ್ಳತನ, ಪುಂಡರ ಹಾವಳಿ ಹಾಗೂ ಕೆಲ ಪೊಲೀಸ್ ಸಿಬ್ಬಂದಿ ಸುಲಿಗೆಯಂತಹ ಸಮಸ್ಯೆಗಳ ಕಡಿವಾಣಕ್ಕೆ ಶೀಘ್ರ ಮುಂದಾಗುವ ಜತೆಗೆ 6 ತಿಂಗಳಿಗೊಮ್ಮೆ ಜನಸಂಪರ್ಕ ಸಭೆ ಆಯೋಜಿಸಲಾಗುವುದು ಎಂದರು.

ಸಾಲು ಸಾಲು ದೂರುಗಳು :

ಇದಕ್ಕೂ ಮೊದಲು ಜನಸಂಪರ್ಕ ಸಭೆಯಲ್ಲಿ ಉಪ ವಿಭಾಗ ವ್ಯಾಪ್ತಿಯ ಸಾರ್ವಜನಿಕರಿಂದ ರಾಶಿ ಸಮಸ್ಯೆಗಳ ಕುರಿತು ದೂರು ಕೇಳಿ ಬಂದವು. ತಾಲೂಕಿನ ರೈತ ಮುಖಂಡ ಕೂಡಲಕುಪ್ಪೆ ನಾಗೇಂದ್ರ ಮಾತನಾಡಿ, ಶ್ರೀರಂಗಪಟ್ಟಣ ಟೌನ್ ಮುಂದಿನ ಬೆಂಗಳೂರು-ಮೈಸೂರು ಹೆದ್ದಾರಿ ವೃತ್ತ, ಕಿರಂಗೂರು ಬನ್ನಿಮಂಟಪ ಮುಂದಿನ ಶ್ರೀರಂಗಪಟ್ಟಣ-ಪಾಂಡವಪುರ-ಮಂಡ್ಯ ವೃತ್ತ ಸೇರಿದಂತೆ ವಿವಿಧೆಡೆ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್ ಇಲ್ಲದೆ ಲೆಕ್ಕ ಇಲ್ಲದಷ್ಟು ಅಪಘಾತಗಳು ಸಂಭವಿಸಿ ಅಸಂಖ್ಯಾತ ಜನರು ಅಸುನೀಗುವ ಜತೆಗೆ ಗಂಭೀರ ಗಾಯಾಳುಗಳಾಗಿದ್ದಾರೆ. ಇದರ ಕಡಿವಾಣಕ್ಕೆ ಟ್ರಾಫಿಕ್ ದೀಪಗಳ ಅಳವಡಿಕೆ ಜತೆಗೆ ಸಂಚಾರಿ ಠಾಣೆ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.

ತಾಲೂಕಿನ ಗೌಡಹಳ್ಳಿ ಗ್ರಾಮದ ದೇವರಾಜು ಹಾಗೂ ಲೋಕೇಶ್ ಮಾತನಾಡಿ, ಗೌಡಹಳ್ಳಿ ಬಳಿ ಕೆಳಸೇತುವೆ ನೀಡದೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇಯನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ ಕಾರಣ ಗೌಡಹಳ್ಳಿ, ಸಬ್ಬನಕುಪ್ಪೆ, ಮಲ್ಲೇಗೌಡನಗೊಪ್ಪಲು, ಟಿ.ಎಂ.ಹೊಸೂರು ಸೇರಿದಂತೆ ಹತ್ತಾರು ಗ್ರಾಮಗಳ ರೈತಾಪಿ ಜನರು ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. ಗಣಂಗೂರಿನ ಹೆದ್ದಾರಿ ಟೋಲ್‌ನಲ್ಲಿ ಶುಲ್ಕ ಭರಿಸದೆ ಸಾವಿರಾರು ವಾಹನಗಳು ಅಕ್ರಮವಾಗಿ ಸರ್ವೀಸ್ ರಸ್ತೆಯಲ್ಲಿ ಸಂಚರಿಸಿ ವಿದ್ಯಾರ್ಥಿಗಳು, ವೃದ್ಧರಿಗೆ ಸಮಸ್ಯೆ ತಂದೊಡ್ಡಿದ್ದಾರೆ. ನಮಗೆ ಕೆಳಸೇತುವೆ ನಿರ್ಮಾಣದ ಜತೆಗೆ ಬಸ್ ನಿಲ್ದಾಣಗಳು ಬೇಕು ಎಂದು ಆಗ್ರಹಿಸಿದರು.

ವಡಿಯಾಂಡಹಳ್ಳಿ ಗ್ರಾಮದ ನಾಗರಾಜು ಮಾತನಾಡಿ, ಅರಕೆರೆ ಠಾಣೆ ವ್ಯಾಪ್ತಿಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ರೈತರ ಕೃಷಿ ಭೂಮಿಯಲ್ಲಿನ ಲಕ್ಷಾಂತರ ರೂ. ಮೌಲ್ಯದ ಪಂಪ್‌ಸೆಟ್‌ಗಳು ಕಳುವಾಗುತ್ತಿದೆ ಎಂದು ಆರೋಪಿಸಿದರು.

ಗಂಜಾಂನ ಏಜಾಜ್ ಪಾಷ ಮಾತನಾಡಿ, ಮಹಿಳೆಯರು ಮಕ್ಕಳು ಸಂಚಾರ ಇರುವ ಸಾರ್ವಜನಿಕ ಸ್ಥಳದಲ್ಲಿ ಎಂಎಸ್‌ಐಎಲ್ ಇರುವ ಕಾರಣ ಕುಡುಕರ ಕಾಟ ಹಾಗೂ ಬಾಟಲಿ, ಲೋಟಗಳು, ತ್ಯಾಜ್ಯದಿಂದ ಜನರು ಹೈರಾಣಾಗಿದ್ದಾರೆ ಎಂದರು.

ಪಾಂಡವಪುರ ತಾಲೂಕಿನ ಲಕ್ಷ್ಮೀಸಾಗರ ಸೇರಿದಂತೆ ವಿವಿಧೆಡೆ ಬೆಟ್ಟಿಂಗ್ ಹಾವಳಿ ಜತೆಗೆ ಪೆಟ್ಟಿಗೆ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿ ಯುವಕರನ್ನು ದುಶ್ಚಟಕ್ಕೆ ದಾಸರನ್ನಾಗಿಸುವ ಜತೆಗೆ ಕುಡಿದು ವಾಹನ ಚಲಾಯಿಸಿ ಅಪಘಾತಗಳಿಗೆ ಸಿಲುಕಿಸುತ್ತಿದ್ದಾರೆ ಎಂದು ಸ್ವಾಮಿ ಆರೋಪಿಸಿದರು.

ಕರುನಾಡ ರಕ್ಷಣ ವೇದಿಕೆ ಪ್ರಿಯಾ ರಮೇಶ್ ಮಾತನಾಡಿ, ಪಟ್ಟಣದ ಬಸ್ ನಿಲ್ದಾಣ, ಶಾಲಾ-ಕಾಲೇಜುಗಳ ಬಳಿ ಪುಂಡುರ ಹಾವಳಿಗೆ ಪೊಲೀಸ್ ಬೀಟ್ ಹೆಚ್ಚಿಸಿ. ಜಿಲ್ಲೆಯಲ್ಲಿ ಹೆಣ್ಣುಭ್ರೂಣ ಹತ್ಯೆ ಆತಂಕ ತರಿಸಿವೆ. ಇವುಗಳ ಕಡಿವಾಣಕ್ಕೆ ಅಂಗನವಾಡಿ ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತೆಯರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಅಕ್ರಮ ತಡೆಗೆ ಜಾಗೃತಿ ಮತ್ತು ತರಬೇತಿ ನೀಡಿ ಎಂದು ಮನವಿ ಮಾಡಿದರು.

ಕಿರಂಗೂರು ಮಹದೇವು ಮಾತನಾಡಿ, ಕೆಲ ಹೆದ್ದಾರಿ ಬೀಟ್ ಪೊಲೀಸರು ಹೊರರಾಜ್ಯ ಹಾಗೂ ಜಿಲ್ಲೆಯ ವಾಹನ ಸವಾರರಿಂದ ಹಣ ಸುಲಿಗೆ ಮಾಡುತ್ತಿದ್ದು, ಇದಕ್ಕೆ ಕ್ರಮ ಜರುಗಿಸಿ ಎಂದರು.

ರೈತ ಮುಖಂಡ ಪಾಂಡು ಮಾತನಾಡಿ, ನದಿ ತೀರ ಹಾಗೂ ಪ್ರಕೃತಿ ತಾಣಗಳ ಕೃಷಿ ಭೂಮಿಗಳಲ್ಲಿ ಪುಂಡರ ಮದ್ಯ ಪಾರ್ಟಿಗಳು ಹೆಚ್ಚಾಗುತ್ತಿದ್ದು, ಪ್ರಶ್ನಿಸುವ ರೈತರ ಮೇಲೆ ಹಲ್ಲೆ ಪ್ರಕರಣ ಹೆಚ್ಚಾಗಿವೆ. ಆದರೆ ತುರ್ತಾಗಿ ಪೊಲೀಸರ ಸಹಾಯ ದೊರಕುತ್ತಿಲ್ಲ ಎಂದರು. ಎಂ.ಶೆಟ್ಟಹಳ್ಳಿ ಗ್ರಾಮದ ವಿಶ್ವಾಸ್ ಮಾತನಾಡಿ, ಗರುಡನ ಉಕ್ಕಡದ ಡಿಆರ್‌ಡಿಒ ಬಳಿಯ ಸರ್ವೀಸ್ ರಸ್ತೆಯಲ್ಲಿ ಆರ್‌ಟಿಒ ಇಲಾಖೆ ಅಧಿಕಾರಿಗಳು ವಾಹನಗಳ ತಪಾಸಣೆ ನಡೆಸುವ ಕಾರಣ ತಪ್ಪಿಸಿಕೊಳ್ಳಲು ಬೃಹತ್ ವಾಹನಗಳು ಹಾಗೂ ಕ್ವಾರೆ ಲಾರಿಗಳು ಸಂಚಾರ ನಿಯಮ ಉಲ್ಲಂಘಿಸಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣರಾಗಿದ್ದಾರೆ ಎಂದರು.

ಮಂಡ್ಯ ರಕ್ಷಣಾ ವೇದಿಕೆ, ದಸಂಸ ಹಾಗೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಇದೆ ವೇಳೆ ಸಾಕಷ್ಟು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಪರಿಹಾರಕ್ಕೆ ಎಸ್ಪಿ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರಸ್ವಾಮಿ, ಡಿವೈಎಸ್ಪಿ ಎಚ್.ಎಸ್.ಮುರಳಿ, ಕೆಆರ್‌ಎಸ್ ವೃತ್ತ ನೀರಿಕ್ಷಕ ಟಿ.ಎಂ.ಪುನೀತ್, ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಬಿ.ಜಿ.ಕುಮಾರ್, ಶ್ರೀರಂಗಪಟ್ಟಣ ಟೌನ್ ಠಾಣೆ ಇನ್‌ಸ್ಪೆೆಕ್ಟರ್ ಬಿ.ಎಸ್.ಪ್ರಕಾಶ್, ಪಾಂಡವಪುರ ಇನ್‌ಸ್ಪೆೆಕ್ಟರ್ ವಿವೇಕಾನಂದ, ಮೇಲುಕೋಟೆ ಇನ್‌ಸ್ಪೆೆಕ್ಟರ್ ಸಿದ್ದಪ್ಪ, ಸೇರಿದಂತೆ ಎಲ್ಲ ಠಾಣೆಗಳ ಪಿಎಸ್‌ಐ ಹಾಗೂ ಸಿಬ್ಬಂದಿ ಸಭೆಯಲ್ಲಿ ಇದ್ದರು.