ಭಾಲ್ಕಿ ತಾಲೂಕಿನ ಅಂಬೆಸಾಂಗವಿಯಲ್ಲಿ ಸೋಮವಾರ ಏರ್ಪಡಿಸಿದ್ದ ನಮ್ಮ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಡಾ.ಗಿರೀಶ್ ಬದೋಲೆ ಮಾತನಾಡಿದರು. ತಾಪಂ ಇಒ ಸೂರ್ಯಕಾಂತ ಬಿರಾದಾರ್, ಎಡಿ ಚಂದ್ರಶೇಖರ ಬನ್ನಾಳೆ ಇದ್ದರು. 
ಜಿಲ್ಲೆ

ಜನರ ಸಮಸ್ಯೆಗಳಿಗೆ ಸೂಕ್ತ ಪರಿಹಾರ

ಭಾಲ್ಕಿ: ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತ ಪರಿಹಾರ ಒದಗಿಸಲು ಪ್ರಯತ್ನಿಸುವುದಾಗಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ್ ಬದೋಲೆ ಹೇಳಿದರು.

ಅಂಬೆಸಾಂಗವಿ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಸಹಯೋಗದಡಿ ಸೋಮವಾರ ಆಯೋಜಿಸಿದ್ದ ನಮ್ಮ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ಸರ್ಕಾರದ ನೀತಿ ನಿಯಮದಂತೆ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸೂರ್ಯಕಾಂತ ಬಿರಾದಾರ್ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆ ನಡೆದಿದ್ದು, ೧೮ ವರ್ಷ ಮೇಲ್ಪಟ್ಟವರು ಮತಪಟ್ಟಿಯಲ್ಲಿ ಹೆಸರು ಸೇರಿಸಬೇಕು. ಇನ್ನು ನಮ್ಮ ಶೌಚಾಲಯ ನಮ್ಮ ಗೌರವ ಯೋಜನೆಯಡಿ ಎಲ್ಲ ಗ್ರಾಮಸ್ಥರು ಶೌಚಗೃಹ ಕಟ್ಟಿಸಿಕೊಳ್ಳಬೇಕು ಎಂದು ಹೇಳಿದರು.

ತಾಪಂ ಸಹಾಯಕ ನಿರ್ದೇಶಕ ಚಂದ್ರಶೇಖರ ಬನ್ನಾಳೆ, ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಪ್ಪ ಹಳ್ಳದ, ಶ್ರೀನಿವಾಸ ಮೆತ್ರೆ, ಗ್ರಾಪಂ ಅಧ್ಯಕ್ಷ, ಸದಸ್ಯರು ಇದ್ದರು. ಚಂದ್ರಕಾಂತ ತಳವಾಡೆ ನಿರೂಪಣೆ ಮಾಡಿದರು. ಪಿಡಿಒ ಗೀತಾ ಪಾಟೀಲ ವಂದಿಸಿದರು.