ಕುಶಾಲನಗರ: ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ ಕಾಂಗ್ರೆಸ್ ಮುಖಂಡರೊಂದಿಗೆ ಗುಡ್ಡೆಹೊಸೂರು ಹಾಗೂ ಬಸವನಹಳ್ಳಿಯ ದಿಡಳ್ಳಿ ಗಿರಿಜನ ಬಡಾವಣೆಗೆ ಗುರುವಾರ ತೆರಳಿ ಮತದಾರರಿಗೆ ಅಭಿನಂದನೆ ಸಲ್ಲಿಸಿ ಅಹವಾಲು ಆಲಿಸಿದರು.
ಬಡವಾಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಅಂಗನವಾಡಿ ಉದ್ಘಾಟನೆ, ಸ್ಮಶಾನ ಹಾಗೂ ಒಳಚರಂಡಿ ಅವ್ಯವಸ್ಥೆ ಸರಿಪಡಿಸುವಂತೆ ಶಾಸಕರಿಗೆ ಗಿರಿಜನ ಮುಖಂಡ ಸ್ವಾಮಿ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಶಾಸಕರು, ಸ್ಥಳದಲ್ಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಶೀಘ್ರವೇ ಕೊಳವೆ ಬಾವಿ ಕೊರೆಸುಸುವಂತೆ ಹಾಗೂ ಒಳಚರಂಡಿ ಅವ್ಯವಸ್ಥೆ ಸರಿಪಡಿಸುವಂತೆ ಸ್ಥಳದಲ್ಲೇ ಆದೇಶ ನೀಡಿದರು.
ಮನವಿ ಸಲ್ಲಿಸಿ ಮಾತನಾಡಿದ ಗಿರಿಜನ ಮುಖಂಡ ಸ್ವಾಮಿ, ಈಗಾಗಲೇ ನಮ್ಮನ್ನು ವಿರಾಜಪೇಟೆಯ ದಿಡ್ಡಳಿಯಿಂದ 2017ರಲ್ಲಿ ಒಕ್ಕಲೆಬ್ಬಿಸಿ ಬಸವನಹಳ್ಳಿಯಲ್ಲಿ ನೆಲೆ ಕಲ್ಪಿಸಿ ಕೊಟ್ಟ ನಂತರ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಮ್ಮ ಬಸವನಹಳ್ಳಿಯ ದಿಡ್ಡಳ್ಳಿ ಗಿರಿಜನ ಬಡಾವಣೆಗೆ ಭೇಟಿ ನೀಡಿ ಮೂಲ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ತದನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ನಮ್ಮ ಸಮಸ್ಯೆಗಳ ನಿವಾರಣೆಗೆ ಸ್ಪಂದಿಸಲಿಲ್ಲ. ಇದೀಗ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಚುನಾಯಿತರಾಗಿರುವ ಡಾ.ಮಂತರ್ ಗೌಡ ಅವರು ನಮ್ಮ ಬೇಡಿಕೆಗೆ ಸ್ಪಂದಿಸುತ್ತಾರೆ ಎಂಬ ಸಂಪೂರ್ಣ ಭರವಸೆ ಇದೆ. ಹಾಗಾಗಿ ಇಂದು ಅವರಿಗೆ ಸಮಸ್ಯೆಗಳ ಬಗ್ಗೆ ಮನವಿ ಪತ್ರ ಸಲ್ಲಿಸಲಾಗಿದೆ ಎಂದರು.
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ಕಾಂಗ್ರೆಸ್ ಪ್ರಮುಖರಾದ ಪ್ರಮೋದ್ ಮುತ್ತಪ್ಪ, ಮಂಜುನಾಥ್ ಗುಂಡೂರಾವ್, ಜೋಸೆಫ್ ವಿಕ್ಟರ್ ಸೋನ್ಸ್, ಚಂದ್ರಶೇಖರ್, ನಂಗಾರು ಜಗ್ಗ ಇತರರು ಇದ್ದರು.