ವಿಜಯವಾಣಿ ಸುದ್ದಿಜಾಲ ದೊಡ್ಡಬೆಳವಂಗಲ
ರಸ್ತೆ ಅಭಿವೃದ್ಧಿ ಕಾಮಗಾರಿಯೇ ಜನರ ಸಂಚಾರಕ್ಕೆ ಸಂಚಕಾರ ತಂದೊಡ್ಡಿದ್ದು, ಗ್ರಾಮಸ್ಥರು ಪರದಾಡುವಂತಾಗಿದೆ.
ಬೆಳವಂಗಲ ಹೋಬಳಿಯ ಕಲ್ಲದೇವನಹಳ್ಳಿ ಕೋಡಿಯಿಂದ ದುಂಡುಮಗೆರೆ ಮಾರ್ಗವಾಗಿ ರಸ್ತೆ ಕಾಮಗಾರಿ ಆರಂಭಿಸಲಾಗಿದೆ. ಕಾಮಗಾರಿಗಾಗಿ ಕೆರೆ ಮಣ್ಣನ್ನು ರಸ್ತೆಗೆ ಬಳಸಲಾಗಿದೆ. ಆದರೆ ಕೆಲವು ದಿನಗಳಿಂದ ಮಳೆ ಸುರಿಯುತ್ತಿದ್ದು ಕೆರೆಯ ಅಂಟುಮಣ್ಣಿನಿಂದ ಸುತ್ತಮುತ್ತಲ ಗ್ರಾಮಸ್ಥರು ಈ ರಸ್ತೆಯಲ್ಲಿ ಓಡಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಎದುರಾಗಿದೆ. ಸಿರವಾರ, ಕಮಲೂರು ಕಲ್ಲದೇವನಹಳ್ಳಿ ಗ್ರಾಮಸ್ಥರು ಸ್ವಗ್ರಾಮದಿಂದ ಬೇರೆ ಕಡೆ ತೆರಳಲು ಸಾಧ್ಯವಾಗದೆ ಗ್ರಾಮದಲ್ಲೇ ದಿಗ್ಬಂಧನ ಹಾಕಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂಬ ಆರೋಪ ಕೇಳಿಬಂದಿದೆ.
ಕೆಸರುಗದ್ದೆಯಾದ ರಸ್ತೆ: ಸಾಮಾನ್ಯವಾಗಿ ಮಣ್ಣು ರಸ್ತೆಗಳು ಮಳೆಗಾಲದಲ್ಲಿ ಕೆಸರು ಗದ್ದೆಯಂತಾಗುತ್ತವೆ. ಇಂಥ ಪರಿಸ್ಥಿತಿಯಲ್ಲಿ ಕಾಮಗಾರಿ ಆರಂಭಿಸಿದ್ದು, ಕೆರೆಯ ಜೌಗುಮಣ್ಣನ್ನು ರಸ್ತೆಗೆ ಸುರಿಯಲಾಗಿದೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ರಸ್ತೆಯಲ್ಲಿನ ಮಣ್ಣು ಬೆರೆತು ಕೆಸರು ಗದ್ದೆಯಂತಾಗಿದೆ. ವಾಹನಗಳು ಈ ರಸ್ತೆಯಲ್ಲಿ ಸಾಗಿದರೆ ಹುದುಗಿಹೋಗುತ್ತವೆ. ಅವುಗಳನ್ನು ಹೊರತೆಗೆಯುವುದೇ ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಕಾಲ್ನಡಿಗೆ ಮೂಲಕ ಈ ರಸ್ತೆಯಲ್ಲಿ ಸಾಗುವುದು ದುಸ್ಸಾಹಸದ ಕೆಲಸವಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಗಡಿಭಾಗ ಕಡೆಗಣನೆ: ಈ ಭಾಗ ದೇವನಹಳ್ಳಿ ಕ್ಷೇತ್ರಕ್ಕೆ ಸೇರಿದೆ. ಆದರೆ ದೊಡ್ಡಬಳ್ಳಾಪುರ ತಾಲೂಕು ವ್ಯಾಪ್ತಿಗೆ ಒಳಪಡುತ್ತದೆ. ಯಾವುದೇ ಕೆಲಸ ಕಾರ್ಯಗಳಿಗೆ ದೊಡ್ಡಬಳ್ಳಾಪುರಕ್ಕೆ ಹೋಗಿಬರಬೇಕಿದೆ. ಜನಪ್ರತಿನಿಧಿಗಳು ಸಹ ಈ ಗಡಿ ಗ್ರಾಮದ ಬಗ್ಗೆ ಹಿಂದಿನಿಂದಲೂ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಾ ಬಂದಿದ್ದಾರೆ. ಆದ್ದರಿಂದ ಈ ಭಾಗದಲ್ಲಿ ನಿರೀಕ್ಷಿತ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ನಡೆಯುವ ಅಭಿವೃದ್ಧಿ ಕೆಲಸಗಳನ್ನೂ ವೈಜ್ಞಾನಿಕವಾಗಿ ನಿರ್ವಹಿಸುವುದಿಲ್ಲ. ಆದ್ದರಿಂದ ಸುತ್ತಮುತ್ತಲ ಗ್ರಾಮದವರು ಪರದಾಡುವಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮೂರು ದಿನಗಳಿಂದ ರಸ್ತೆಯಲ್ಲಿ ಓಡಾಡಲು ಸಾಧ್ಯವಾಗಿಲ್ಲ. ರಸ್ತೆಗೆ ಅಂಟು ಮಣ್ಣನ್ನು ಸುರಿದಿದ್ದಾರೆ. ದ್ವಿಚಕ್ರ ವಾಹನಗಳಲ್ಲಿ ಈ ರಸ್ತೆ ದಾಟಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಮಗಾರಿಯೂ ಆಮೆವೇಗದಲ್ಲಿ ಸಾಗುತ್ತಿದೆ.
ದೇವರಾಜು, ತಿಪ್ಪೂರು
ಮಳೆ ಬಂದಾಗ ರಸ್ತೆಗಳು ಕೆಸರು ಗದ್ದೆಗಳಾಗಿ ಮಾರ್ಪಡುತ್ತದೆ ಇಂಥ ಸನ್ನಿವೇಶದಲ್ಲಿ ರಸ್ತೆ ಕಾಮಗಾರಿ ಶುರು ಮಾಡಿದ್ದಾರೆ. ಕೆರೆಯ ಅಂಟು ಮಣ್ಣನ್ನು ರಸ್ತೆಯ ಕಾಮಗಾರಿಗೆ ಬಳಸಿದ್ದಾರೆ.
ದಿನ ಬೆಳಗಾದರೆ ಹಳ್ಳಿಗಳಿಂದ ನಗರ ಪ್ರದೇಶಗಳಿಗೆ ಹೋಗಿಬರುವವರಿಗೆ ಇದರಿಂದ ತುಂಬಾ ತೊಂದರೆ ಎದುರಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು.
ವಿಜಯಲಕ್ಷ್ಮಿ, ಗ್ರಾಪಂ ಮಾಜಿ ಅಧ್ಯಕ್ಷೆ
ಮಳೆ ಬಂದ ಕಾರಣ ರಸ್ತೆ ಕಾಮಗಾರಿ ವಿಳಂಬವಾಗಿದೆ. ಜನರಿಗೆ ಓಡಾಡಲು ತೊಂದರೆಯಾಗಿದೆ ಹಾಗೂ ಈ ಭಾಗದಲ್ಲಿ ಹೆಚ್ಚು ಅಂಟುಮಣ್ಣಿಂದ ಕೂಡಿರುವುದರಿಂದ ಸಮಸ್ಯೆ ಎದುರಾಗಿದೆ. ಕಾಮಗಾರಿ ಚುರುಕುಗೊಳಿಸಲಾಗುವುದು ಸಾಧ್ಯವಾದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವ ಪ್ರಯತ್ನ ಮಾಡಲಾಗುವುದು.
ಮೋಹನ್ ನಾಯಕ್, ಇಂಜಿನಿಯರ್