ಜಿಲ್ಲೆ

ಜನರ ಮನಸ್ಸಿನಲ್ಲಿ ಉಳಿಯುವ ಕೆಲಸ ಮಾಡಿ

ನಂಜನಗೂಡು: ಚುನಾಯಿತ ಜನಪ್ರತಿನಿಧಿಗಳಿಗೆ ಅಧಿಕಾರ ಶಾಶ್ವತವಲ್ಲ. ಆದರೆ ಜನರು ನೀಡಿರುವ ಅಧಿಕಾರ ಬಳಸಿಕೊಂಡು ನಾವು ನಿರ್ವಹಿಸುವ ಅಭಿವೃದ್ಧಿ ಕೆಲಸಗಳು ಸದಾ ಜನರ ಮನಸ್ಸಿನಲ್ಲಿ ಉಳಿಯುತ್ತವೆ ಎಂದು ಮಾಜಿ ಶಾಸಕ ಬಿ.ಹರ್ಷವರ್ಧನ್ ಅಭಿಪ್ರಾಯಪಟ್ಟರು.


ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಮಂಗಳವಾರ ನಗರದ ಯಾತ್ರಿ ಭವನದಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವವರು ಉತ್ತಮ ಕೆಲಸ ಮಾಡುವ ಮೂಲಕ ಜನರ ನಿರೀಕ್ಷೆಗಳನ್ನು ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ನಾನು ಶಾಸಕನಾಗಿದ್ದ 5 ವರ್ಷದ ಅವಧಿಯಲ್ಲಿ ದಾಖಲೆ ಪ್ರಮಾಣದ ಅಭಿವೃದ್ಧಿ ಕಾಮಗಾರಿಗಳನ್ನು ಜಾರಿಗೊಳಿಸಿದ್ದೇನೆ. ನಾನು ಶಾಸಕನಾಗಿ ಆಯ್ಕೆಯಾಗಿದ್ದ ವೇಳೆ ಪ್ರತಿಪಕ್ಷದಲ್ಲಿದ್ದರೂ ನೂರು ದಿನಗಳ ಕಾಲಾವಧಿಯ ಒಳಗೆ ಮಹತ್ವದ ನುಗು ಏತ ನೀರಾವರಿಯಂತಹ ಯೋಜನೆಯನ್ನು ರಾಜ್ಯ ಬಜೆಟ್‌ನಲ್ಲಿ ಸೇರಿಸಲು ಯಶಸ್ವಿಯಾಗಿದ್ದೆ. ಆದರೆ ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನಗಳಾಗಿದ್ದು, ನಂಜನಗೂಡಿನಲ್ಲಿ ಯಾವ ಮಟ್ಟದ ಪ್ರಗತಿ ಸಾಗಿದೆ ಎಂಬುದನ್ನು ಜನರೇ ವಿಮರ್ಶಿಬೇಕಿದೆ ಎಂದರು.


ಬಿಜೆಪಿ ಬೆಂಬಲಿತರಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯಿತಿ 10 ಅಧ್ಯಕ್ಷರು, 11 ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಸ್.ಮಹದೇವಪ್ಪ, ಜಿ.ಪಂ.ಮಾಜಿ ಸದಸ್ಯರಾದ ಎಸ್.ಎಂ.ಕೆಂಪಣ್ಣ, ಸಿ.ಚಿಕ್ಕರಂಗನಾಯಕ, ಬಿಜೆಪಿ ಮಂಡಲ ಅಧ್ಯಕ್ಷ ಹೊರಳವಾಡಿ ಮಹೇಶ್, ನಗರ ಘಟಕದ ಅಧ್ಯಕ್ಷ ಶ್ರೀನಿವಾಸರೆಡ್ಡಿ, ಬಿಜೆಪಿ ರಾಜ್ಯ ಸಮಿತಿ ಸದಸ್ಯ ಕುಂಬ್ರಳ್ಳಿ ಸುಬ್ಬಣ್ಣ, ಬಾಲಚಂದ್ರು, ಹೆಮ್ಮರಗಾಲ ಸೋಮಣ್ಣ, ಶಿವಣ್ಣ, ನಗರಸಭೆ ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ಹುಲ್ಲಹಳ್ಳಿ ಮೋಹನ್, ಹುರ ಚಂದ್ರು, ಶಿರಮಳ್ಳಿ ಮಹದೇವಸ್ವಾಮಿ, ನಗರಸಭೆ ಸದಸ್ಯ ಕಪಿಲೇಶ್, ಮಹದೇವಪ್ರಸಾದ್ ಇತರರು ಇದ್ದರು.