ಬಾಗಲಕೋಟೆ: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಆಗಿರುವ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಜನರ ಬಳಿ ತೆರಳಿ ಕರ ಪತ್ರ ಹಂಚುವ ಮೂಲಕ ಮತದಾನ ಜಾಗೃತಿ ಮೂಡಿಸಲು ಮುಂದಾದರು.
ಪ್ರಸಕ್ತ ಚುನಾವಣೆಯಲ್ಲಿ ಮತದಾನ ಪ್ರಮಾಣ ನೂರಕ್ಕೆ ನೂರರಷ್ಟು ಮಾಡುವ ನಿಟ್ಟಿನಲ್ಲಿ ಗದ್ದನಕೇರಿ ಕ್ರಾಸ್‌ನಲ್ಲಿ ಕಾಯಿಪಲ್ಲೆ ಮಾರಾಟ ಮಾಡುತ್ತಿರುವ ಮಹಿಳೆಯ ಬಳಿ ತೆರಳಿ ವ್ಯಾಪಾರ ವ್ಯವಹಾರದ ಬಗ್ಗೆ ವಿಚಾರಿಸಿ ಮತದಾನ ಜಾಗೃತಿಯ ಕರಪತ್ರವನ್ನು ನೀಡಿದರು. ಮೇ ೭ ರಂದು ನಡೆಯುವ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡುವಂತೆ ತಿಳಿಸಿದರು.
ಜಿಲ್ಲಾ ಸ್ವೀಪ್ ಅಧ್ಯಕ್ಷರ ಜೊತೆಗೆ ಜಿ.ಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ ಅವರು ಬೀದಿ ಬದಿ ವ್ಯಾಪಾರಸ್ಥರು, ಆಟೋ ಚಾಲಕರು, ವಿವಿಧ ಪಾನ್ ಶಾಪ್ ಮತ್ತು ಇತರೆ ಶಾಪ್ ಹಾಗೂ ಮನೆ ಮನೆ ಮನೆಗಳಿಗೆ ತೆರಳಿ ಕರಪತ್ರ ಹಂಚುವ ಮೂಲಕ ಜಾಗೃತಿ ಮೂಡಿಸಲು ಅವರು ಸಹ ಮುಂದಾದರು. ಗದ್ದನಕೇರಿ ಕ್ರಾಸ್ ಪ್ರತಿನಿತ್ಯ ಜನದಟ್ಟನೆಯಿಂದ ಕೂಡಿರುತ್ತಿದ್ದು, ಕ್ರಾಸ್ ಬಳಿ ಬೃಹತ್ ಮಾನವ ಸರಪಳಿ ನಿರ್ಮಾಣ ಮಾಡುವ ಮೂಲಕ ಎಲ್ಲರ ಗಮನ ಸೆಳೆಯಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸ್ವೀಪ್ ಅಧ್ಯಕ್ಷ ಶಶಿಧರ ಕುರೇರ ಜಗತ್ತಿನಲ್ಲಿಯೇ ಅತೀ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ಭಾರತದಲ್ಲಿ ಪ್ರಜೆಗಳು ಪ್ರಜೆಗಳನ್ನೇ ಆಯ್ಕೆ ಮಾಡುವ ಗುಪ್ತ ಮತದಾನ ಪದ್ದತಿ ಜಾರಿಯಲ್ಲಿದ್ದು, ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕೆಂದರು. ಪ್ರಜಾಪ್ರಭುತ್ವ ರಾಷ್ಟçದಲ್ಲಿ ಜೀವನ ಮಾಡುವಂತ ನಾವುಗಳು ಮತದಾನ ಹಕ್ಕನ್ನು ಚಲಾಯಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ ಯೋಜನಾ ನಿರ್ದೇಶಕ ಶಶಿಕಾಂತ ಶಿವಪುರೆ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಜೀವನಕುಮಾರ, ಶಿಶು ಅಭಿವೃದ್ದಿ ಯೋಜನಾಧಿಕಾರಿ ದಸ್ತಗಿರಿಸಾಬ ಮುಲ್ಲಾ ಸೇರಿದಂತೆ ಜಿಲ್ಲಾ ಪಂಚಾಯತ, ತಾಲೂಕಾ ಪಂಚಾಯತ, ಗ್ರಾಮ ಪಂಚಾಯತ ಹಾಘೂ ಸ್ವ-ಸಹಾಯಕ ಸಂಘದ ಸದಸ್ಯರು ಪಾಲ್ಗೊಂಡಿದ್ದರು.