ಜಿಲ್ಲೆ

ಜನರ ಪ್ರೀತಿ, ನಂಬಿಕೆಗೆ ಧಕ್ಕೆ ತರಲ್ಲ :ಶಾಸಕ ಎಚ್.ಪಿ.ಸ್ವರೂಪ್

ಹಾಸನ: ಚುನಾವಣೆ ಸಂದರ್ಭದಲ್ಲಿ ದಲಿತರು ಮತ್ತು ಎಲ್ಲಾ ವರ್ಗದವರು ನನ್ನ ಮೇಲೆ ಪ್ರೀತಿ, ಅಭಿಮಾನ ಮತ್ತು ನಂಬಿಕೆಯಿಟ್ಟು ನನಗೆ ಆಶೀರ್ವಾದ ಮಾಡಿದ್ದಾರೆ. ಅದಕ್ಕೆ ಧಕ್ಕೆಯಾಗದಂತೆ ಕೆಲಸ ಮಾಡುವುದಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೇಲೆ ಪ್ರಮಾಣ ಮಾಡುತ್ತೇನೆ ಎಂದು ಶಾಸಕ ಎಚ್.ಪಿ.ಸ್ವರೂಪ್ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಭಾನುವಾರ ನೂತನ ಶಾಸಕರಾಗಿ ಆಯ್ಕೆಯಾದ ಸ್ವರೂಪ ಅವರಿಗೆ ಅಭಿನಂದನ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ನೀವು ಇಟ್ಟಿರುವ ಪ್ರೀತಿಗೆ ಬೆಲೆ ಕಟ್ಟಲಾಗುವುದಿಲ್ಲ, ದಲಿತ ಮುಖಂಡರು ಚುನಾವಣೆ ಸಂದರ್ಭದಲ್ಲಿ ಮನೆ ಮನೆಗೆ ತೆರಳಿ, ನನ್ನ ಪರ ಪ್ರಚಾರ ಮಾಡಿದ್ದಾರೆ ಅವರು ಜನರಿಗೆ ಕೊಟ್ಟಿರುವಂತಹ ಎಲ್ಲಾ ಆಶ್ವಾಸನೆಗಳನ್ನು ನಾನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಚುನಾವಣೆ ಸಂದರ್ಭದಲ್ಲಿ ಜಾತಿ ಭೇದ ಮರೆತು ಎಲ್ಲರೂ ಕೂಡ ದೇಣಿಗೆ ಸಂಗ್ರಹಿಸಿ ನನಗೆ ಸಹಾಯ ಮಾಡಿದ್ದಾರೆ.ಗೆದ್ದಿರುವುದು ಇದು ನನ್ನ ಗೆಲುವಲ್ಲ ಪ್ರತಿಯೊಬ್ಬರೂ ನನಗಾಗಿ ಹೋರಾಟ ಮಾಡಿದಂತವರ ಗೆಲುವಾಗಿದೆ. ನನ್ನ ಮೇಲೆ ಜವಾಬ್ದಾರಿ ಇದೆ,ಅದನ್ನ ನಾನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. ನಮ್ಮ ತಂದೆಯವರ ಮಾಡಿದ ಪುಣ್ಯದ ಫಲ ನಾನು ಶಾಸಕನಾಗಿ ಆಯ್ಕೆಯಾಗಿದ್ದೇನೆ, ಎಲ್ಲಾ ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸವನ್ನ ಮಾಡಲಾಗುವುದು ಎಂದು ಹೇಳಿದರು.

ನಾನು ಈ ಬಾರಿ ಚುನಾವಣೆಗೆ ನಿಲ್ಲಲು ಪ್ರಮುಖ ಕಾರಣ ನಮ್ಮ ತಂದೆಯವರು ಚುನಾವಣೆಯಲ್ಲಿ ಸೋತು ಸಾಕಷ್ಟು ನೊಂದಿದ್ದರು ಅವರು ಕೊನೆ ಉಸಿರಲಿರುವ ಸಮಯದಲ್ಲಿ ಕೂಡ ಆ ನೋವು ಅವರಿಗೆ ಕಾಡುತ್ತಿತ್ತು. ಆ ಹಿನ್ನೆಲೆಯಲ್ಲಿ ನಾನು ಗೆದ್ದು ಅವರ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಬೇಕು ಎಂಬ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸಿದೆ ಎಂದು ಹೇಳಿದರು.

ದಲಿತ ಮುಖಂಡ ಕೆ.ಈರಪ್ಪ ಮಾತನಾಡಿ ಅವರು, ಬಿಜೆಪಿ ಸರ್ಕಾರ ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ದಲಿತರ ಪರವಾದ ಒಂದೇ ಒಂದು ಕಾರ್ಯಕ್ರಮಗಳನ್ನ ರೂಪಿಸಲಿಲ್ಲ, ಅಲ್ಲದೆ ಸಂವಿಧಾನವನ್ನು ತಿದ್ದುಪಡಿ ತರಲು ಹೊರಟಿದ್ದರು ಇದರ ವಿರುದ್ಧವಾಗಿ ಇಲ್ಲಿಯ ಸ್ಥಳೀಯ ಶಾಸಕರು ಕೂಡ ದಲಿತರ ಪರವಾಗಿ ಧ್ವನಿ ಎತ್ತಲಿಲ್ಲ, ಈ ಹಿನ್ನೆಲೆಯಲ್ಲಿ ಅವರನ್ನ ಸೋಲಿಸಲು ನಾವು ಜಾತ್ಯತೀತ ಪಕ್ಷವನ್ನ ಬೆಂಬಲಿಸಿದ್ದೇವೆ ಎಂದರು.

ದಲಿತ ಮುಖಂಡ ಕಾರ್ಯಕ್ರಮದಲ್ಲಿ ಶಾಸಕ ಸ್ವರೂಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ದಲಿತ ಸಂಘಟನೆಗಳ ಮುಖಂಡರಾದ ನಾರಾಯಣದಾಸ್,ಎಚ್.ಕೆ. ಸಂದೇಶ್, ಕೃಷ್ಣದಾಸ್, ಕ್ರಾಂತಿ ಪ್ರಸಾದ ತ್ಯಾಗಿ, ದೇವರಾಜ್, ರಮೇಶ್, ಸ್ವಾಮಿ ನಿಟ್ಟೂರು, ಅರುಣ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ತಂದೆಯ ಆನಾರೋಗ್ಯದ ಸಂದರ್ಭದಲ್ಲಿ ನಮ್ಮ ಹತ್ತಿರ ಹಣ ಇರಲಿಲ್ಲ.

ನಮ್ಮ ತಂದೆ ಆರು ಬಾರಿ ಚುನಾವಣೆಗೆ ಸ್ಪರ್ಧಿಸಿ ನಾಲ್ಕು ಬಾರಿ ಶಾಸಕರಾಗಿದ್ದರು ಅವರು ಎಂದೂ ಕೂಡ ಅಧಿಕಾರ, ಕುರ್ಚಿಗೆ ಆಸೆಪಡಲಿಲ್ಲ, ಹಣ,ಆಸ್ತಿಯನ್ನ ಮಾಡಲಿಲ್ಲ, ಜನರ ಪ್ರೀತಿ ಸಂಪಾದಿಸಿದರು ಅವರು ಅನಾರೋಗ್ಯದ ಸಂದರ್ಭದಲ್ಲಿ ಕಿಡ್ನಿ ಬದಲಾವಣೆ ಮಾಡಬೇಕಾದ ಅನಿವಾರ್ಯತೆ ಇತ್ತು. ಈ ಸಂದರ್ಭದಲ್ಲಿ 50 ಲಕ್ಷ ಹಣ ಖರ್ಚಾಗುತ್ತಿತ್ತು. ಆಗ ನಮ್ಮ ಹತ್ತಿರ ಅಷ್ಟು ಹಣ ಇರಲಿಲ್ಲ, ಸಾಲ ಮಾಡಿ ಚಿಕಿತ್ಸೆ ನೀಡಿ ನೀಡಬೇಕಾಯಿತು ಎಂದು ತಮ್ಮ ಸಂಕಷ್ಟದ ದಿನಗಳನ್ನು ಶಾಸಕರು ಮೆಲುಕು ಹಾಕಿದರು.