ಜಿಲ್ಲೆ

ಜನರ ನೋವಿಗೆ ಸ್ಪಂದಿಸಿ ಕೆಲಸ ಮಾಡಿ


ಕಲಬುರಗಿ: ಜನರ ನೋವು ಅರಿತು ಸ್ಪಂದಿಸಲು ತಹಸೀಲ್ದಾರ್, ಉಪ ತಹಸೀಲ್ದಾರ್, ಗ್ರಾಮ ಲೆಕ್ಕಿಗರು ಇತರ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಕಂದಾಯ ಸಚಿವ ಆರ್. ಅಶೋಕ್ ತಾಕೀತು ಮಾಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕೆಲ ತಹಸೀಲ್ದಾರರು ಸರಿಯಾದ ಮಾಹಿತಿ ನೀಡದ್ದಕ್ಕೆ ಗರಂ ಅದರು. ಬರ ಪರಿಸ್ಥಿತಿ ಬಗ್ಗೆ ಸರಿಯಾಗಿ ಮಾಹಿತಿ ನೀಡದ ಅಫಜಲಪುರ ತಹಸೀಲ್ದಾರರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ವೃದ್ಧಾಪ್ಯ ವೇತನ ಮನೆ ಬಾಗಿಲಿಗೆ ತಲುಪಿಸುವ ಯೋಜನೆ ಬಗ್ಗೆ ಬಳ್ಳಾರಿ ಜಿಲ್ಲಾಧಿಕಾರಿ ನಕುಲ್ ಅವರಿಗೆ ಸಂಪೂರ್ಣ ಜ್ಞಾನವಿದೆ. ಅವರಿಂದ ಮಾಹಿತಿ ಪಡೆದು ವಿಭಾಗ ಮಟ್ಟದ ಜಿಲ್ಲಾಧಿಕಾರಿಗಳ ಸಭೆ ನಡೆಸುವಂತೆ ಪ್ರಾದೇಶಿಕ ಆಯುಕ್ತ ಡಾ.ಎನ್.ವಿ. ಪ್ರಸಾದ ಅವರಿಗೆ ಸೂಚಿಸಿದರು.
ಹೆಚ್ಚು ಸಮಸ್ಯೆಗಳಿರುವ ಜಿಲ್ಲೆಯ ಒಂದು ಹಳ್ಳಿ ಆಯ್ಕೆ ಮಾಡಿ ಪ್ರತಿ ತಿಂಗಳ ಮೂರನೇ ಶನಿವಾರ ಡಿಸಿ ಸೇರಿ ಎಲ್ಲ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹರಿಸಬೇಕು. ಜನಪ್ರತಿನಿಧಿಗಳೂ ಪಾಲ್ಗೊಳ್ಳುವಂತೆ ಸುತ್ತೋಲೆ ಹೊರಡಿಸಲಾಗುವುದು ಎಂದರು.
ಗ್ರಾಮ ಭೇಟಿ ಸಂದರ್ಭದಲ್ಲಿ ದಲಿತರು, ಬಡವರ ಮನೆಯಲ್ಲೇ ಜಿಲ್ಲಾಧಿಕಾರಿಗಳು ಮಧ್ಯಾಹ್ನದ ಭೋಜನ ಮಾಡಬೇಕು. ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ ಅಥವಾ ವಿವಾದಿತ ವ್ಯಕ್ತಿಗಳ ಮನೆಯಲ್ಲಿ ಊಟ ಮಾಡಬಾರದು. ಒಂದು ವೇಳೆ ಯಾರದ್ದೇ ಮನೆಯಲ್ಲಿ ಊಟ ಮಾಡದಿದ್ದರೆ ಅಂಗನವಾಡಿ ಇಲ್ಲವೇ ಶಾಲೆಯಲ್ಲಿ ಬಿಸಿಯೂಟ ಸೇವಿಸಲು ಸೂಚಿಸಿದರು.
ಜಿಲ್ಲಾಧಿಕಾರಿ ಶರತ್ ಬಿ. ಮಾತನಾಡಿ, ಜಿಲ್ಲೆಯಲ್ಲಿ ಪ್ರತಿ ತಿಂಗಳು ಹೋಬಳಿ ಮಟ್ಟದ ಜನಸ್ಪಂದನ ಸಭೆ ನಡೆಸಲಾಗುತ್ತಿದೆ. ಹೊಸದಾಗಿ ಹಳ್ಳಿಗೆ ಹೋಗುವ ಕಾರ್ಯ ಮಾಡಲು ಸಿದ್ಧರಿರುವುದಾಗಿ ತಿಳಿಸಿದರು.
ಸಂಸದ ಡಾ.ಉಮೇಶ ಜಾಧವ್ ಮಾತನಾಡಿ, ಅಧಿಕಾರಿಗಳು ಪ್ರತಿ ಸಭೆಯಲ್ಲಿ ಸರಿಯಾದ ಅಂಕಿ-ಅಂಶಗಳ ಮಾಹಿತಿ ನೀಡುತ್ತಿಲ್ಲ ಎಂದು ತಹಸೀಲ್ದಾರ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕರಾದ ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ್, ರಾಜಕುಮಾರ ಪಾಟೀಲ ತೆಲ್ಕೂರ, ಸುಭಾಷ ಗುತ್ತೇದಾರ್, ಬಿ.ಜಿ.ಪಾಟೀಲ್, ಆರ್ಸಿ ಡಾ.ಪ್ರಸಾದ, ಅಪರ ಡಿಸಿ ಡಾ.ಶಂಕ್ರಣ್ಣ ವಣಿಕ್ಯಾಳ ಇತರರಿದ್ದರು.