ಜಿಲ್ಲೆ

ಜನರ ನಿರೀಕ್ಷೆಯಂತೆ ಕ್ಷೇತ್ರ ಅಭಿವೃದ್ಧಿಯಾಗಲಿ

ಕೆ.ಆರ್.ನಗರ: ಶಾಸಕ ಸ್ಥಾನ ಮುಳ್ಳಿನ ಹಾಸಿಗೆ ಇದ್ದಂತೆ. ತಾಲೂಕಿನ ಜನತೆ ಬಹಳ ನಿರೀಕ್ಷೆ ಇಟ್ಟು ನೂತನ ಶಾಸಕರನ್ನು ಆಯ್ಕೆ ಮಾಡಿದ್ದಾರೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದರೆ ನಮ್ಮದೇನು ವಿರೋಧವಿಲ್ಲ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಶಾಸಕ ಡಿ.ರವಿಶಂಕರ್‌ಗೆ ಕಿವಿಮಾತು ಹೇಳಿದರು.


ಪಟ್ಟಣದ ಎಚ್.ಡಿ.ದೇವೇಗೌಡ ಸಮುದಾಯ ಭವನದಲ್ಲಿ ತಾಲೂಕು ಒಕ್ಕಲಿಗರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ಶನಿವಾರ ಆಯೋಜಿಸಿದ್ದ ವಾರ್ಷಿಕ ಮಹಾಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ದೊಡ್ಡ ದೊಡ್ಡ ನಾಯಕರೆಲ್ಲ ಸೋತಿದ್ದಾರೆ, ಅವರ ಸೋಲಿಗೆ ಕಾರಣವಿತ್ತು. ಆದರೆ ನನ್ನ ಸೋಲಿಗೆ ಕಾರಣ ಏನೆಂಬುದೇ ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಶಾಸಕನಾಗಿದ್ದ 15 ವರ್ಷಗಳ ನನ್ನ ಆಡಳಿತ ಅವಧಿಯಲ್ಲಿ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದೇನೆ. ಚುನಾವಣೆಯಲ್ಲಿ ಬದಲಾವಣೆ ಬಯಸಿದ ಕೆ.ಆರ್.ನಗರ ಕ್ಷೇತ್ರದ ಜನತೆ ಹೊಸ ಶಾಸಕರ ಆಯ್ಕೆ ಮಾಡಿದ್ದು, ಮುಂದಿನ ದಿನಗಳಲ್ಲಿ ಯಾವ ಬದಲಾವಣೆ ಆಗುತ್ತದೆಯೋ ಅದನ್ನೇ ತಾಲೂಕಿನ ಜನರು ನಿರೀಕ್ಷೆೆ ಮಾಡಿರಬಹುದು ಎಂದು ಭಾವಿಸುತ್ತೇನೆ ಎಂದರು.


ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಹಾಗೂ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಿರ್ಲೆ ಶ್ರೀ ನಿವಾಸಗೌಡ ಮಾತನಾಡಿ, 2019ರಲ್ಲಿ ಪ್ರಾರಂಭವಾದ ತಾಲೂಕು ಒಕ್ಕಲಿಗರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಕೋವಿಡ್ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಿದೆ. ಸಹಕಾರ ಸಂಘಗಳಲ್ಲಿ ಒಕ್ಕಲಿಗರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಜಿಲ್ಲೆಯಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
2020-2023 ನೇ ಸಾಲಿನಲ್ಲಿ ಸೊಸೈಟಿ 2.27. ಕೋಟಿ ರೂ. ವಹಿವಾಟು ನಡೆಸಿದ್ದು, 4.38.ಲಕ್ಷ ರೂ. ಆದಾಯ ಬಂದಿದೆ. ಪ್ರಸ್ತುತ 905 ಷೇರುದಾರರು ಇದ್ದು, ರಸ್ತೆಬದಿ ವ್ಯಾಪಾರಿಯಿಂದ ದೊಡ್ಡ ಉದ್ದಿಮೆದಾರರಿಗೂ ಸೊಸೈಟಿ ಸಾಲ ನೀಡಿದೆ ಎಂದು ಸಭೆಯಲ್ಲಿ ಪ್ರಕಟಿಸಿದರು.
ಪತ್ರಕರ್ತ ವಿನಯ್ ದೊಡ್ಡಕೊಪ್ಪಲು, ಗ್ರಾ.ಪಂ. ಅಧ್ಯಕ್ಷ ಬಾಲು, ಅನೀಫ್ ಗೌಡ ಸೇರಿದಂತೆ 2020-2023 ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಸೊಸೈಟಿ ಉಪಾಧ್ಯಕ್ಷ ವಡ್ಡರಕೊಪ್ಪಲು ಶಿವರಾಮ್, ನಿರ್ದೇಶಕರಾದ ಸಿ.ಜೆ.ಅರುಣ್‌ಕುಮಾರ್, ಶಂಕರೇಗೌಡ, ಹೆಬ್ಬಾಳು, ರಾಜು, ಅನೀಫ್ ಕುಮಾರ್, ಸಿ.ಜೆ.ಸುದೀಶ್, ವಕೀಲ ತಿಮ್ಮಪ್ಪ, ಎಂ.ಜಿ.ಕಲ್ಪನಾ ಧನಂಜಯ, ಕೆ.ವಿ.ಕವಿತಾ ಪ್ರಕಾಶ್, ಸಿ.ಜೆ.ಆನಂದ್, ಪುರಸಭೆ ಸದಸ್ಯ ಸಂತೋಷ್‌ಗೌಡ, ಮಿರ್ಲೆ ಗ್ರಾ.ಪಂ. ಅಧ್ಯಕ್ಷ ಬಾಲು, ಗ್ರಾ.ಪಂ. ಸದಸ್ಯೆ ಮಂಗಳಮ್ಮ, ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಜೀವನ್, ಜೆಡಿಎಸ್ ಮುಖಂಡ ಹೆಬ್ಬಾಳು ಸುಜಯ್, ತಾಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರಾಜಮ್ಮ, ಜೆಡಿಎಸ್ ಮುಖಂಡರಾದ ಬಂಗಾರಿ, ರುದ್ರೇಶ್, ಘನತೆಕುಮಾರ್, ಹೇಮಂತ್ ಇದ್ದರು.