ಹಾಸನ: ಮೊದಲ ಬಾರಿಗೆ ಸಂಸತ್ತಿಗೆ ಜಿಲ್ಲೆಯ ಜನರು ನನ್ನನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ನನ್ನ ಮೇಲೆ ಅಪಾರವಾದ ವಿಶ್ವಾಸ ಇರಿಸಿಕೊಂಡಿದ್ದು, ಅವರ ವಿಶ್ವಾಸ ಉಳಿಸಿಕೊಳ್ಳುತ್ತೇನೆ. ಜಿಲ್ಲೆಯಲ್ಲಿ ಇರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಕೆಲಸ ಮಾಡುತ್ತೇನೆ ಎಂದು ನೂತನ ಸಂಸದ ಶ್ರೇಯಸ್ ಪಟೇಲ್ ಅವರು ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳವಾರ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ನನ್ನ ಮುಂದೆ ಹಲವು ಸವಾಲು, ನಿರೀಕ್ಷೆಗಳಿವೆ. ಜೂ. 24 ಅಥವಾ 25ರಂದು ದೆಹಲಿಗೆ ತೆರಳಿ ಪ್ರತಿಜ್ಞಾ ವಿಧಿ ಸ್ವೀಕರಿಸುತ್ತೇನೆ. ಈ ಮಾಸಾಂತ್ಯಕ್ಕೆ ಎಲ್ಲ ಇಲಾಖೆಗಳ ಸ್ಥಿತಿಗತಿಗಳ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆನಂತರ ನಂತರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚಿಸುತ್ತೇನೆ ಎಂದರು.
ನನ್ನ ಕಾರ್ಯವ್ಯಾಪ್ತಿಯ ಬಗ್ಗೆ ತಿಳಿದುಕೊಳ್ಳುತ್ತಿದ್ದೇನೆ. ಬಹುಶಃ ಇನ್ನೆರಡು ತಿಂಗಳಲ್ಲಿ ಎಲ್ಲವನ್ನೂ ತಿಳಿದುಕೊಂಡು ಹಾಲಿ ಜಿಲ್ಲೆಯಲ್ಲಿ ಇರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಬಗ್ಗೆ ಹಾಗೂ ಮಾಡಬೇಕಾದ ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸುತ್ತೇನೆ. ವಾರದಲ್ಲಿ ಇಂತಿಷ್ಟು ದಿನ ಜಿಲ್ಲಾ ಕೇಂದ್ರದಲ್ಲಿ ಇದ್ದು, ಜನರಿಂದ ನೇರವಾಗಿ ಆಹವಾಲು ಸ್ವೀಕರಿಸುವಂತಹ ವ್ಯವಸ್ಥೆಯನ್ನು ಮಾಡುತ್ತೇನೆ. ಪ್ರತಿ ತಿಂಗಳು ಮೂರ್ನಾಲ್ಕು ಬಾರಿ ಅಧಿಕಾರಿಗಳ ಸಭೆ ನಡೆಸಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಕಾರ್ಯಗತಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ಜಿಲ್ಲೆಯಲ್ಲಿ ಕಾಡಾನೆ-ಮಾನವ ಸಂಘರ್ಷ ದೊಡ್ಡ ಸಮಸ್ಯೆಯಾಗಿದೆ. ಆನೆ ಹಾವಳಿಗೆ ಕಡಿವಾಣ ಹಾಕುವ ಯೋಜನೆಗೆ ಕೇಂದ್ರ ಸರ್ಕಾರದಿಂದ 50 ಕೋಟಿ ರೂ. ಬಿಡುಗಡೆಗೆ ಡಿಎಫ್‌ಒ ಕೋರಿದ್ದಾರೆ. ಈ ಸಂಬಂಧ ವಿಸ್ತೃತ ವರದಿ ನೀಡಲು ಸೂಚಿಸಿದ್ದೇನೆ. ಜಿಲ್ಲೆಯ ಎಲ್ಲ ಶಾಸಕರು ಮುಖಂಡರನ್ನೊಳಗೊಂಡ ನಿಯೋಗದೊಂದಿಗೆ ಸಿಎಂ ಭೇಟಿ ಮಾಡಲಿದ್ದೇವೆ. ಈ ಸಮಸ್ಯೆಯನ್ನೇ ಆದ್ಯತೆಯಾಗಿ ಪರಿಗಣಿಸಲಿದ್ದೇನೆ. ಮೊದಲ ಅಧಿವೇಶದಲ್ಲಿಯೇ ಈ ಬಗ್ಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.
ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ. ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಮಾತ್ರವಷ್ಟೇ ಅಲ್ಲದೇ ಪ್ರತಿ ತಾಲೂಕಿನಲ್ಲೂ ವಿಶೇಷ ಐತಿಹಾಸಿಕ, ಪುರಾಣ ಪ್ರಸಿದ್ಧ ಸ್ಥಳಗಳಿವೆ. ಪುರಾತನ ದೇವಾಲಯ ಜತೆಗೆ ಪ್ರಾಕೃತಿಕ ಸೌಂದರ್ಯದ ತಾಣಗಳಿವೆ. ಪ್ರವಾಸೋದ್ಯಮದ ಬೆಳವಣಿಗೆಗೆ ಯೋಜನೆ ರೂಪಿಸಲಾಗುವುದು ಎಂದರು.
ಜಿಲ್ಲೆಯಲ್ಲಿನ ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಉದ್ಯಮಗಳ ಸ್ಥಾಪನೆ ಪ್ರಯತ್ನ ಮಾಡುತ್ತೇನೆ. ಮಂಡ್ಯ ಕ್ಷೇತ್ರದ ಸಂಸದರಾಗಿರುವ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಬೃಹತ್ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾಗಿದ್ದು, ಅವರ ಸಹಕಾರ ಪಡೆದು ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪಿಸಿ ಉದ್ಯೋಗ ಸೃಷ್ಟಿಯತ್ತ ಗಮನ ಹರಿಸುತ್ತೇನೆ. ಹಾಗೂ ಜಿಲ್ಲೆಯ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ಪಡೆಯುತ್ತೇನೆ. ಹಾಸನದ ಏರ್ ಪೋರ್ಟ್ ಕಾಮಗಾರಿ ಪೂರ್ಣವಾಗಿಲ್ಲ. ಹಣ ಬಿಡುಗಡೆ, ಭೂ ಪರಿಹಾರ ವಿತರಣೆಯಂತಹ ಸಮಸ್ಯೆಗಳಿವೆ. ಟಾಸ್ಕ್ ಫೋರ್ಸ್ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗೆ ಜುಲೈ ಎರಡನೇ ವಾರ ಏರ್ ಪೋರ್ಟ್ ಕಾಮಗಾರಿ ಪೂರ್ಣಗೊಳಿಸಲು ಅಗತ್ಯವಾದ ಕ್ರಮಗಳ ಬಗ್ಗೆ ಚರ್ಚಿಸಲು ಸಭೆ ಕರೆಯುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಜನಪ್ರತಿನಿಧಿಯಾಗಿ ಸದಾ ಜನರಿಗೆ ಲಭ್ಯವಿರಬೇಕು. ಮತದಾರರಿಗೆ ಚುನಾವಣೆ ಸಂದರ್ಭದಲ್ಲಿ ನೀಡಿರುವ ಭರವಸೆಯಂತೆ ನಡೆದುಕೊಳ್ಳುತ್ತೇನೆ. ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಗ್ರಾಮ ಪಂಚಾಯಿತಿವಾರು ಭೇಟಿ ನೀಡಿ ಜನರ ಬಳಿಗೆ ಆಡಳಿತ ಕೊಂಡೊಯ್ಯುವ ಗುರಿ ಇದೆ. ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಹೇಗೆ ಸ್ಪಂದಿಸಲಿದೆ ಎನ್ನುವುದು ಮುಂದೆ ಅರ್ಥವಾಗಲಿದೆ. ಜನರು ನನ್ನ ಮೇಲೆ ಭಾರಿ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ರಾಜ್ಯ ಸರ್ಕಾರದ ನೆರವು ಬಳಸಿಕೊಂಡು ಅಭಿವೃದ್ಧಿ ಕೆಲಸಗಳನ್ನು ಮಾಡುವ ಗುರಿ ಇದೆ ಎಂದರು.
ಈ ವೇಳೆ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಚ್.ವೇಣುಕುಮಾರ್, ರಾಜ್ಯ ಸಮಿತಿ ಸದಸ್ಯ ಎಚ್.ಬಿ.ಮದನಗೌಡ, ವಿಶೇಷ ಆಹ್ವಾನಿತ ರವಿನಾಕಲಗೂಡು, ಉಪಾಧ್ಯಕ್ಷ ಕೆ.ಎಂ.ಹರೀಶ್, ಕಾರ್ಯದರ್ಶಿ ಸಿ.ಬಿ.ಸಂತೋಷ್ ಇದ್ದರು.