ಪಾ.ಶ್ರೀ.ಅನಂತರಾಮ್ ಕೋಲಾರ
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬಂಪರ್ ಕೊಡುಗೆ ನಿರೀಕ್ಷಿಸಿದ್ದ ಜನತೆಗೆ ಬಜೆಟ್ನಲ್ಲಿ ನಿರಾಸೆ ಉಂಟಾಗಿದೆ.
ಈಗಾಗಲೆ ಚಾಲ್ತಿಯಲ್ಲಿರುವ ಮೊದಲ ಹಂತದ ಕೆಸಿ ವ್ಯಾಲಿ ಯೋಜನೆಗೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ 1350 ಕೋಟಿ ರೂ. ಖರ್ಚು ಮಾಡಲಾಗಿತ್ತು. ಇದರಿಂದ 126 ಕೆರೆಗಳಿಗೆ ನೀರು ಹರಿಸಲಾಗಿತ್ತು. ಅಂದಿನಿಂದಲೂ 2ನೇ ಹಂತದ ಕಾಮಗಾರಿ ಮೂಲಕ ಕೆರೆಗಳಿಗೆ ಇನ್ನಷ್ಟು ಶುದ್ಧ ನೀರು ಒದಗಿಸಲು ಪಕ್ಷಾತಿತವಾಗಿ ಒತ್ತಾಯಿಸಲಾಗುತ್ತಿತ್ತು.
ಒತ್ತಡಕ್ಕೆ ಮಣಿದೋ, ಬಿಜೆಪಿಗೆ ಕ್ರೆಡಿಟ್ ಸಿಗಲೆಂದೋ ಒಟ್ಟಿನಲ್ಲಿ ಕೆಸಿ ವ್ಯಾಲಿ ನೀರನ್ನು 2ನೇ ಹಂತದ ಶುದ್ಧೀಕರಣ ಹಾಗೂ ಇನ್ನಷ್ಟು ಕೆರೆಗಳಿಗೆ ಹರಿಸಲು 455 ಕೋಟಿ ರೂ. ಘೋಷಣೆ ಮಾಡುವ ಮೂಲಕ ಜನರ ಆಕ್ರೋಶ ಮಣಿಸುವ ಜಾಣತನ ತೋರಿದ್ದಾರೆ.
ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ನಿಮಾರ್ಣ: ಕೋಲಾರ ತಾಲೂಕಿನ ಸುಗಟೂರು ಹೋಬಳಿಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ 10 ಎಕರೆ ಪ್ರದೇಶದಲ್ಲಿ ಸ್ವಯಂ ಚಾಲಕ ಚಾಲನಾ ಪರೀಕ್ಷಾ ಪಥ ನಿಮಾರ್ಣಕ್ಕೆ ಈ ಹಿಂದೆಯೇ ಯೋಜನೆ ರೂಪಿಸಲಾಗಿತ್ತು. ಆದರೆ ಅನುದಾನ ಸಿಗದೆ ಯೋಜನೆ ನನೆಗುದಿಗೆ ಬಿದ್ದಿತ್ತು, ಇದಕ್ಕೆ ಚಾಲನೆ ನೀಡುವ ಸಲುವಾಗಿ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದ್ದು ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಹೆಚ್ಚಿನ ಅನುಕೂಲವಾಗಲಿದೆ.
ಈ ಯೋಜನೆ ದೇವನಹಳ್ಳಿ, ಕೋಲಾರ, ಹೊಸಕೋಟೆ, ಗದಗ, ಬಳ್ಳಾರಿ, ವಿಜಯಪುರ, ಬೀದರ್, ಯಾದಗಿರಿ ಮತ್ತು ದಾವಣಗೆರೆಯಲ್ಲಿ ಜಾರಿಗೆ ತರಲು ಉದ್ದೇಶಿಸಿದ್ದು, ಇದಕ್ಕೆ ಮೀಸಲಿಟ್ಟಿರುವ 80 ಕೋಟಿ ರೂ.ನಲ್ಲಿ ಕೋಲಾರ ಜಿಲ್ಲೆಗೆ 8.89 ಕೋಟಿ ರೂ. ಸಿಗಲಿದೆ.
ಕೆರೆಗಳ ಅಭಿವೃದ್ಧಿ: ಜಿಲ್ಲೆಯಲ್ಲಿ 2500ಕ್ಕೂ ಹೆಚ್ಚು ಕೆರೆಗಳಿವೆ. ಬಹುತೇಕ ಕೆರೆಗಳು ಒತ್ತುವರಿ ಹಾಗೂ ಹೂಳು ತುಂಬಿ ಹಾಳಾಗಿವೆ. ಬಜೆಟ್ನಲ್ಲಿ 1000 ಕೆರೆಗಳ ಅಭಿವೃದ್ಧಿಗೆ 500 ಕೋಟಿ ರೂ. ಘೋಷಣೆ ಮಾಡಿದ್ದು ಇದರಲ್ಲಿ 200 ಕೋಟಿ ರೂ.ಗಳನ್ನು ಪ್ರವಾಹ ಪೀಡಿತ ಪ್ರದೇಶದ ಕೆರೆಗಳ ಅಭಿವೃದ್ಧಿಗೆ ಉಳಿದ 300 ಕೋಟಿ ರೂ.ಗಳನ್ನು ಜಿಲ್ಲೆಗಳಿಗೆ ಹಂಚಿಕೆ ಮಾಡುವುದರಿಂದ ಜಿಲ್ಲೆಗೆ ಸಿಗಬಹುದಾದ 2ರಿಂದ 3 ಕೋಟಿ ರೂ.ಗಳ ಅನುದಾನದಲ್ಲಿ 25ರಿಂದ 30 ಕೆರೆ ಅಭಿವೃದ್ಧಿಪಡಿಸಬಹುದೇ ವಿನಾ ಕೆರೆಗಳ ಸಮಗ್ರ ಅಭಿವೃದ್ಧಿ ಸಾಧ್ಯವಾಗುವುದಿಲ್ಲ.
ಶಿಲ್ಪಿಗಳಿಗೆ ಪ್ರೋತ್ಸಾಹ: ಮಾಲೂರು ತಾಲೂಕಿನ ಶಿವಾರಪಟ್ಟಣ ಶಿಲ್ಪಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಬಜೆಟ್ನಲ್ಲಿ ಪ್ರಸ್ತಾಪಿಸಿರುವ ಸಿಎಂ ಕಾದಿರಿಸುವ ಅನುದಾನದ ಬಗ್ಗೆ ಸ್ಪಷ್ಟ ಚಿತ್ರಣ ನೀಡಿಲ್ಲ. ಈಗಾಗಲೆ ಕ್ಷೇತ್ರದ ಶಾಸಕ ಕೆ.ವೈ.ನಂಜೇಗೌಡ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಶಿವಾರಪಟ್ಟಣದ ಅಭಿವೃದ್ಧಿಗೆ 10 ಕೋಟಿ ರೂ. ಮಂಜೂರು ಮಾಡಿಸಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಶಿಲ್ಪಿಗಳ ಪ್ರೋತ್ಸಾಹಕ್ಕೆ ರೂಪಿಸಬಹುದಾದ ಯೋಜನೆ ಕುತೂಹಲ ಮೂಡಿಸಿದೆ.
ಈಡೇರದ ಬೇಡಿಕೆಗಳು: ಅತಿ ಹೆಚ್ಚು ಸಂಖ್ಯೆಯಲ್ಲಿರುವ ಪರಿಶಿಷ್ಟ ಜಾತಿ, ಪ.ಪಂಗಡ ಹಾಗೂ ಒಬಿಸಿ ವಿದ್ಯಾರ್ಥಿಗಳು ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಸೀಟು ಸಿಗದೆ ಸಾಲ ಮಾಡಿ ಖಾಸಗಿ ಕಾಲೇಜುಗಳಲ್ಲಿ ಶಿಕ್ಷಣ ಪಡೆಯುವಂತಾಗಿದೆ. ಕೋಲಾರ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಬೇಕೆಂಬ ಆಗ್ರಹಕ್ಕೆ ಸಿಎಂ ಸ್ಪಂದಿಸದಿರುವುದು ಚರ್ಚೆಗೆ ಗ್ರಾಸವಾಗಿದೆ.
ಜಿಲ್ಲೆಯಲ್ಲಿ ಅತಿ ಹೆಚ್ಚು ತರಕಾರಿ, ಹಣ್ಣು ಬೆಳೆಯುತ್ತಿದ್ದು, ಸಂಸ್ಕರಣಾ ಘಟಕಕ್ಕೆ ರೈತರು ಒತ್ತಾಯಿಸುತ್ತಲೇ ಬಂದಿದ್ದಾರೆ. ಶ್ರೀನಿವಾಸಪುರ ಇಡೀ ವಿಶ್ವಕ್ಕೆ ವಿವಿಧ ತಳಿಯ ಮಾವು ನೀಡುವ ಮೂಲಕ ಖ್ಯಾತಿ ಹೊಂದಿದೆ. ಸಿಎಂ ಸ್ವಂತ ಜಿಲ್ಲೆಯಾದ ಹಾವೇರಿಗೆ ಸೇರಿದ ಹಾನಗಲ್ಗೆ ಮಾವು ಸಂಸ್ಕರಣಾ ಘಟಕ ಘೋಷಣೆ ಜತೆಗೆ ಕೋಲಾರಕ್ಕೂ ಆದ್ಯತೆ ನೀಡಿದ್ದರೆ ರೈತರಿಗೆ ಅನುಕೂಲವಾಗುತ್ತಿತ್ತು.
ಧ್ವನಿ ಎತ್ತಲು ನಾಯಕರೇ ಇಲ್ಲ: ಜಿಲ್ಲೆಯಲ್ಲಿ ಜವಳಿ ಉದ್ಯಮ ಅಭಿವೃದ್ಧಿಗೆ ಒಳ್ಳೆಯ ಅವಕಾಶಗಳಿದ್ದು ಕೆಜಿಎಫ್ನಲ್ಲಿ ಜವಳಿ ಉದ್ಯಮ ಸ್ಥಾಪನೆಗೆ ಬಜೆಟ್ನಲ್ಲಿ ಅವಕಾಶ ಕಲ್ಪಿಸಬಹುದೆಂಬ ಜನರ ಆಸೆ ಈಡೇರಿಲ್ಲ. ಕೆಜಿಎಫ್ನಲ್ಲಿ ಚಿನ್ನದ ಗಣಿಗೆ ಸೇರಿದ 1500 ಎಕರೆ ಪ್ರದೇಶವನ್ನು ಕೈಗಾರಿಕಾ ಹಬ್ ಮಾಡುವುದಾಗಿ ಜನಪ್ರತಿನಿಧಿಗಳು ನೀಡಿದ ಹೇಳಿಕೆ ಠುಸ್ ಆಗಿದೆ. ಜಿಲ್ಲೆಯಲ್ಲಿ ಹೊಸ ಕೈಗಾರಿಕೆ ಸ್ಥಾಪನೆ, ವರ್ತುಲ ರಸ್ತೆ ನಿಮಾರ್ಣ, ನನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆ ಬಗ್ಗೆ ಸಿಎಂ ಚಕಾರ ಎತ್ತದಿರುವುದು ಅಚ್ಚರಿ ಮೂಡಿದ್ದು, ಇದಕ್ಕೆ ಜಿಲ್ಲೆಯ ಅಭಿವೃದ್ಧಿಗಾಗಿ ಧ್ವನಿ ಎತ್ತಲು ನಾಯಕ ಇಲ್ಲದಿರುವುದು ಕಾರಣ ಎಂದರೆ ತಪ್ಪಾಗಲಾರದು.